ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಆತ್ಮಹತ್ಯೆಗೆ ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ (Jalahalli Metro Station) ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇಂದು (ಜ.20) ಬೆಳಗ್ಗೆ 10:30 ರ ಸುಮಾರಿಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಪ್ಲಾಟ್‌ಟ್‌ಫಾರಂಗೆ ರೈಲು ಆಗಮಿಸುತ್ತಿದ್ದಂತೆ ಹಳಿಗೆ ಜಿಗಿದು ಹಳಿ ಮೇಲೆ ಅಡ್ಡಲಾಗಿ ಮಲಗಿದ್ದಾರೆ. ಕೂಡಲೇ ಎಚ್ಚೆತ್ತ ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ತುರ್ತು ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಿಹಾರ ಮೂಲದ ವಾಯುಪಡೆ ನಿವೃತ್ತ ಯೋಧ 49 ವರ್ಷದ ಅನಿಲ್ ಕುಮಾರ್ ಪಾಂಡೆ ಎನ್ನುವುದು ತಿಳಿದುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವ ಜಾಲಹಳ್ಳಿ ಭದ್ರತಾ ವಿಭಾಗದ ಸಿಬ್ಬಂದಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್ | ಇಂದಿನಿಂದಲೇ ದರ ಏರಿಕೆ – ಯಾವುದು ಎಷ್ಟು?
ಘಟನೆಯಿಂದಾಗಿ ಕೆಲ ಕಾಲ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಶವಂತಪುರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಮಾತ್ರ ಸಂಚಾರ ಕಲ್ಪಿಸಲಾಗಿತ್ತು.
ಅನಿಲ್ ಕುಮಾರ್ ಪಾಂಡೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಒಂದು ವಾರದ ಹಿಂದೆಯಷ್ಟೇ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬಂದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಮೆಟ್ರೋ ನಿಲ್ದಾಣಕ್ಕೆ ಕುಟುಂಬ ಆಗಮಿಸಿತ್ತು. ಈಗ ಮತ್ತೆ ಪಾಂಡೆಯನ್ನು ಸೇನಾ ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.
ಮೆಟ್ರೋ ಹಳಿಗೆ ಜಿಗಿದಿದ್ದಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.