ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿತಾಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ನಂಧಿಗಿರಿಧಾಮಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ನಂದಿಬೆಟ್ಟದ ಪ್ರವೇಶದ್ವಾರದ ಟಿಕೆಟ್ ಕೌಂಟರ್ ಬಳಿಯಿಂದ ನಂದಿ ಬೆಟ್ಟದ ಮೇಲ್ಭಾಗಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ವಾರದ 5 ದಿನಗಳಲ್ಲಿ ಸಂಪೂರ್ಣವಾಗಿ ವಾಹನಗಳ ಪ್ರವೇಶವನ್ನು ನಿರ್ಬಂಧ ಮಾಡಿದ್ದು, ಶನಿವಾರ ಹಾಗೂ ಭಾನುವಾರ ಮಾತ್ರ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗವುದು ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ನಂದಿಬೆಟ್ಟದ ಮೇಲ್ಭಾಗದ ಪ್ರವೇಶ ದ್ವಾರದ ಟಿಕೆಟ್ ಕೌಂಟರ್ ಕೆಳಭಾಗದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲಿಯೇ ಎಲ್ಲಾ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂದಿಬೆಟ್ಟದ ಮೇಲ್ಭಾಗಕ್ಕೆ ನಡೆದುಕೊಂಡೇ ಹೋಗಬೇಕಿದೆ. ಸದ್ಯ ವಾರದ 5 ದಿನಗಳಲ್ಲಿ ಮಾತ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆಗೆ ಜಾಗ ಸಾಕಾಗುವುದಿಲ್ಲ. ಹೀಗಾಗಿ ನಂದಿಬೆಟ್ಟದ ಪ್ರವೇಶಕ್ಕೆ ಶನಿವಾರ-ಭಾನುವಾರ ಅನುಮತಿ ನೀಡಲಾಗುತ್ತಿದೆ.
Advertisement
Advertisement
ನಂದಿಬೆಟ್ಟದಲ್ಲಿ ಗಾಳಿ ಕಲುಷಿತವಾಗುವುದನ್ನು ತಡೆದು ಪರಿಸರ ಮಾಲಿನ್ಯವಾಗದಂತೆ ನಂದಿಬೆಟ್ಟದ ಪ್ರಾಕೃತಿಕ ಸೌಂದರ್ಯ ಉಳಿಸಿ ಬೆಳೆಸುವ ಸಲುವಾಗಿ ಈ ಕ್ರಮ ಕೈಗೊಂಡಿದ್ದೀವಿ ಎಂದು ಅಧಿಕಾರಿಗಳು ನಂದಿಗಿರಿಧಾಮದ ಎಡಿಎಚ್‍ಒ ರವಿಕುಮಾರ್ ತಿಳಿಸಿದ್ದಾರೆ. ಸದ್ಯ ಪ್ರವೇಶದ್ವಾರದ ಬಳಿಯ ಪಾರ್ಕಿಂಗ್ ಜಾಗದವರೆಗೂ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಂದಿಬೆಟ್ಟದ ಕೆಳಭಾಗದಲ್ಲೇ ಎಂದರೆ ತಪ್ಪಲಿನ ಬುಡದಲ್ಲೇ ವಾಹನಗಳ ನಿಲುಗಡೆಗೆ ಜಾಗ ಪಡೆದಿದ್ದು ಅಲ್ಲಿಯೇ ಎಲ್ಲಾ ವಾಹನಗಳ ಪಾರ್ಕಿಂಗ್ ಅವಕಾಶ ಮಾಡಿಕೊಡಲಿದ್ದೇವೆ. ನಂತರ ಅಲ್ಲಿಂದ ಪ್ರವಾಸಿಗರು ವಿಶೇಷ ಬಸ್ ವ್ಯವಸ್ಥೆ ಅಥವಾ ಏಕೋ ವೆಹಿಕಲ್ಸ್ ಮೂಲಕ ಬೆಟ್ಟಕ್ಕೆ ಕರೆದೊಯ್ಯುವ ಕಾರ್ಯದ ಚಿಂತನೆಯನ್ನು ಸಹ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ.
ಕೆವಲ ನಂದಿಬೆಟ್ಟದ ಮೇಲ್ಭಾಗದಲ್ಲಿನ ಗಾಂಧಿ ನಿಲಯ, ನೆಹರು ನಿಲಯ ಸೇರಿದಂತೆ ಕೆಎಸ್‍ಟಿಡಿಸಿಯಲ್ಲಿ ರೂಂಗಳನ್ನು ಕಾಯ್ದಿರಿಸಿರುವವರ ಹಾಗೂ ಅಧಿಕಾರಿಗಳ ವಾಹನಗಳಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಿ ವಿನಾಯತಿ ನೀಡಲಾಗುತ್ತಿದೆ.
ನಂದಿಗಿರಿಧಾಮದಲ್ಲಿ ಶನಿವಾರ ಭಾನುವಾರ ಬಂತಂದ್ರೆ ಸಾವಿರಾರು ಪ್ರವಾಸಿಗರು ಆಗಮಿಸುವ ಹಿನ್ನೆಲೆ, ವಾಹನಗಳ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗಿ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಅಲ್ಲದೆ ಟೈರ್ ನಿಂದ ಬರುವ ವಾಸನೆ ಹಾಗೂ ವಾಹನಗಳು ಸೂಸುವ ಹೊಗೆಯಿಂದ ಇಡೀ ನಂದಿಬೆಟ್ಟದ ವಾತಾವರಣವೇ ಕಲ್ಮಶವಾಗಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಗಳು ಉಂಟಾಗುತ್ತಿದ್ದವು. ಹೀಗಾಗಿ ಈ ಪರಿಸ್ಥಿತಿಗಳಿಗೆ ಕಡಿವಾಣ ಹಾಕಿ ನೈಜ ಗಾಳಿ ಸಿಗುವಂತೆ ಮಾಡಲು ಈ ಮೊದಲು ದ್ವಿಚಕ್ರವಾಹನಗಳಿಗೆ ಬ್ರೇಕ್ ಹಾಕಿದ್ದ ಆಧಿಕಾರಿಗಳು, ಈಗ ವಾರದ 5 ದಿನ ಎಲ್ಲಾ ವಾಹನಗಳಿಗೆ ಬ್ರೇಕ್ ಹಾಕಿ ಹೊಸ ಪ್ರಯೋಗ ಮಾಡಿದ್ದಾರೆ.