– ಖಾಲಿ ಹೊಡೆಯುತ್ತಿದೆ ವಿಧಾನಸೌಧ
– ರೆಸಾರ್ಟಿನಲ್ಲಿ ಮಜಾ ಮಾಡಿ, ಕ್ಷೇತ್ರಕ್ಕೆ ಬರಬೇಡಿ
– ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಡಿ
ಬೆಂಗಳೂರು: ಈ ರೀತಿಯ ಕೀಳುಮಟ್ಟದ ಹೊಲಸು ರಾಜಕೀಯವನ್ನು ನಾವು ನೋಡಿಲ್ಲ. ಬರಗಾಲ ಇದೆ, ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು ನೀರಿಲ್ಲ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಶಾಸಕರು ರೆಸಾರ್ಟ್ ಗೆ ಹೋಗುತ್ತಿದ್ದಾರೆ ಎಂದು ಶಾಸಕರನ್ನು ಹುಡುಕಿಕೊಂಡು ಹಳ್ಳಿಗಳಿಂದ ಬಂದ ಜನ ತರಾಟೆ ತಗೆದುಕೊಳ್ಳುತ್ತಿದ್ದಾರೆ,
ಮುಖ್ಯವಾಗಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಿಂದ ರೈತರು ಬೆಂಗಳೂರಿಗೆ ಬಂದಿದ್ದಾರೆ. ಇತ್ತ ಆಡಳಿತ ಪಕ್ಷ ಹಾಗೂ ವಿಪಕ್ಷ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬರುತ್ತಿದೆ. ಫೋನ್ ಮಾಡಿದರೂ ಸಿಗುತ್ತಿಲ್ಲ, ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸುತ್ತಿಲ್ಲ ಎಂದು ಶಾಸಕರ ವಿರುದ್ಧ ಜನ ಕಿಡಿ ಕಾರುತ್ತಿದ್ದಾರೆ.
ಜಾಧವ್ ಎಲ್ಲಿ: ರಾಯಚೂರು ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರು ಕೈ ಮುಖಂಡರ ಕೈಗೂ ಸಿಗದೇ ಅತ್ತ ಕ್ಷೇತ್ರದ ಜನರಿಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಜೊತೆಗೆ ಚಿಂಚೋಳಿ ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ಶಾಸಕರನ್ನು ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಜೆಡಿಎಸ್ ಶಾಸಕರು ಕೂಡ ಕೈಗೆ ಸಿಗುತ್ತಿಲ್ಲ. ಸಚಿವ ಎಂ.ಸಿ.ಮನಗೂಳಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಇಂತಹ ಶಾಸಕರು ನಮಗೇಕೆ ಬೇಕು ಎಂದು ಜನರು ಛೀಮಾರಿ ಹಾಕುತ್ತಿದ್ದಾರೆ.
ಮೈಸೂರು: ಶಾಸಕರ ನಡೆಯನ್ನು ನಮಗೆ ನಾಚಿಕೆ ತರುವಂತಿದೆ. ಮತ ಕೇಳುವಾಗ ಗಲ್ಲಿ, ಬೀದಿ ಇಳಿದು ನಮ್ಮ ಮುಂದೆ ಬಂದು ಮತ ಕೇಳುತ್ತಾರೆ. ಆದರೆ ಜಯಗಳಿಸಿದ ಮೇಲೆ ರೆಸಾರ್ಟ್ ರಾಜಕೀಯ ಮಾಡುತ್ತಾರೆ. ನಾವು ಯಾಕೆ ಇಂತಹವರನ್ನು ಆಯ್ಕೆ ಮಾಡಿದ್ದೇವೆ ಅಂತ ಅಸಹ್ಯವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೈಸೂರಿನ ನಾಗರಿಕರು ಮೂರು ಪಕ್ಷಗಳ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.
ಬಳ್ಳಾರಿ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಒಬ್ಬ ಶಾಸಕರಾಗಲಿ, ಸಚಿವರಾಗಲಿ ಬಂದು ನಮ್ಮ ನೋವನ್ನು ಕೇಳಿಲ್ಲ. ರೆಸಾರ್ಟ್ ರಾಜಕೀಯ ಹೇಸಿಗೆ ತರಿಸುವಂತಿದೆ. ಜನರಿಗೆ, ದನಕರುಗಳಿಗೆ ನೀರಿಲ್ಲ, ಉದ್ಯೋಗವಿಲ್ಲ. ಹೀಗಿರುವಾಗ ರಾಜ್ಯದ ಶಾಸಕರು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿದ್ದಾರೆ. ಆಪರೇಷನ್ ಕಮಲ ಮಾಡುವ ಮೂಲಕ ಬಿಜೆಪಿ ಅವರೇ ರೆಸಾರ್ಟ್ ರಾಜಕೀಯ ಆರಂಭಿಸಿದರು. ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ತಮ್ಮ ಶಾಸಕರ ಮೇಲೆ ಪಕ್ಷದ ವರಿಷ್ಠರು ಹಾಗೂ ನಾಯಕರಿಗೆ ನಂಬಿಕೆ ಇಲ್ಲದಂತಾಗಿದೆ. ಕಳೆದ ಕೆಲವು ದಿನಗಳ ಬೆಳವಣಿಗೆ ನಮಗೆ ನಾಚಿಕೆ ತರುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿ: ನೀತಿಗೆಟ್ಟ ರಾಜಕೀಯವನ್ನು ಶಾಸಕರು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗಮನ ನೀಡದೆ ಸಾರ್ವಜನಿಕರ ಹಣವನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಮಜಾ ಮಾಡುತ್ತಿದ್ದಾರೆ. ಇಂತಹ ಶಾಸಜಕರು ನಮಗೆ ಬೇಡವೇ ಬೇಡ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರೆಸಾರ್ಟ್ ರಾಜಕೀಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv