ಬದಲಾವಣೆ ಜಗದ ನಿಯಮ. ಜಗತ್ತಿನಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದು ವಸ್ತು, ಜೀವಿ ಮುಂತಾದವು ಯಾವುದೋ ಒಂದು ರೀತಿಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.
Advertisement
ಬದಲಾವಣೆಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣಿಸುವ ಬದಲಾವಣೆ, ಕೆಲವೊಂದು ಕಣ್ಣಿಗೆ ಕಾಣಿಸದಿರುವ ಬದಲಾವಣೆ. ಆದರೆ ಎಲ್ಲದಕ್ಕೂ ತಾಳ್ಮೆಯಿಂದ ಕಾಯಬೇಕು ಅಷ್ಟೆ. ಆದರೆ ಮನುಷ್ಯನಲ್ಲಿ ತಾಳ್ಮೆ ಅನ್ನೋದೇ ಇಲ್ಲ. ಯಾವುದೋ ಒಂದು ರೀತಿಯ ನಿರ್ಧಾರದಿಂದ ಇಲ್ಲಸಲ್ಲದ ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಾನೆ. ಇದು ಒಂದು ರೀತಿ ಮೊದಲಿನಿಂದಲೂ ನಡೆದುಕೊಂಡು ಬಂದ ಬಳುವಳಿಯಾಗಿದೆ. ಯಾರಿಗೂ ಒಂದುಕ್ಷಣ ಸುಮ್ಮನೇ ಕುಳಿತು ಯೋಚಿಸುವ ತಾಳ್ಮೆಯೇ ಇಲ್ಲ. ದೇವರು ಇದ್ದಾನೋ ಇಲ್ವೋ ಗೊತ್ತಿಲ್ಲ? ಹಣೆಬರಹ ಇದೆಯೋ ಇಲ್ವೋ ಗೊತ್ತಿಲ್ಲ? ದೇವರು ಏನಾದರೂ ಮಾಡಬಹುದು, ಹಣೆಬರಹದಲ್ಲಿ ಇದ್ದ ಹಾಗೆಯೇ ಆಗುತ್ತದೆ ಎಂದು ನಂಬಿ ಕುಳಿತುಕೊಳ್ಳುವವರೂ ಇದ್ದಾರೆ. ಆದರೆ ಅದನ್ನೆಲ್ಲಾ ನಂಬಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.
Advertisement
Advertisement
ಮನುಷ್ಯ ಬದಲಾವಣೆಯನ್ನು ಬಯಸುತ್ತಾನೆ. ಆದರೆ ಅದಕ್ಕಾಗಿ ಕಾಯುವುದೂ ಇಲ್ಲ, ಅದಕ್ಕೆ ಬೇಕಾದ ಪರಿಶ್ರಮವನ್ನೂ ಪಡುವುದಿಲ್ಲ. ಮನುಷ್ಯ ಬಯಸುವುದು ದಿಡೀರ್ ಬದಲಾವಣೆ ಮತ್ತು ಪರಿಶ್ರಮ ರಹಿತ ಬದಲಾವಣೆ. ಇದು ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ. ಜೀವನ ಎನ್ನುವುದು ಇಲ್ಲಿ ನಾವು ಏನು ಮಾಡುತ್ತೇವೆ? ಯಾಕೆ ಮಾಡುತ್ತೇವೆ? ಹೇಗೆ ಮಾಡುತ್ತೇವೆ? ಯಾರಿಗೋಸ್ಕರ ಮಾಡುತ್ತೇವೆ? ಎನ್ನುವುದರ ಮೇಲೆ ನಿಂತಿದೆ. ಒಂದು ಮಾತು ಮಾತ್ರ ಸತ್ಯ, ಇವತ್ತು ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ನಾಳಿನ ಭವಿಷ್ಯ ಆಗುತ್ತದೆ. ಏನೇ ಮಾಡಬೇಕು ಎಂದುಕೊಂಡಿದ್ದರೂ ಒಳ್ಳೆಯದನ್ನು ಮಾಡಿ, ಅದು ನಿಮ್ಮ ಭವಿಷ್ಯವನ್ನು ಒಳ್ಳೆಯದನ್ನಾಗಿ ಮಾಡುತ್ತದೆ. ಕೆಟ್ಟದ್ದನ್ನೇ ಮಾಡುವುದಾದರೆ ಮಾಡಿ, ಅದನ್ನು ಮುಂದೆ ನೀವು ಅನುಭವಿಸುತ್ತೀರಿ. ಅಷ್ಟೇ ಬೇರೆ ಯಾರಿಗೂ ಯಾವುದೇ ರೀತಿ ತೊಂದರೆಯಿಲ್ಲ. ಬೇರೆಯವರಿಗಾಗಿ ಒಳ್ಳೆಯದನ್ನು ಮಾಡಬೇಕಾ? ಬಿಡಬೇಕಾ? ನಿಮ್ಮ ಇಷ್ಟ. ಆದರೆ ಮಾಡಿದ ಮೇಲೆ ಅವರಿಂದ ಯಾವತ್ತೂ ಕೂಡ ಅದರ ಪ್ರತಿಫಲಕ್ಕಾಗಿ ಕಾಯಬೇಡಿ. ಸಿಗಬಹುದು, ಸಿಗದೇ ಇರಬಹುದು.
Advertisement
ಭವಿಷ್ಯ ಎನ್ನುವುದು ಮಾತ್ರ ನಿಮ್ಮ ಇಂದಿನ ನಡೆವಳಿಕೆಯನ್ನು ಅವಲಂಬಿಸಿದೆ. ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ, ಖುಷಿಯಿಂದ ಬದುಕಬೇಕು ಎಂದುಕೊಂಡಿದ್ದರೆ ಅದಕ್ಕೆ ಇಂದಿನಿಂದಲೇ ಪರಿಶ್ರಮ ಪಡಿ. ಏನೇ ಸಿಗುವುದಾದರೂ ಅದು ನಿಮಗೆ. ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗದೇ ಇದ್ದರೆ, ಮುಂದುವರಿಯಿರಿ. ಒಂದಲ್ಲ ಒಂದಿನ ನಿಮ್ಮ ಭೂತಕಾಲದ ಪರಿಶ್ರಮ ಅವಶ್ಯವಾಗಿ ಭವಿಷ್ಯವಾಗುತ್ತದೆ. ಆದರೆ ತಾಳ್ಮೆಯಿಂದ ಕಾಯುತ್ತಲಿರಿ.
ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ನಾಳೆಗಾಗಿ ಕಾಯಬೇಡಿ. ರಾತ್ರಿ ಮಲಗಿದ ಮೇಲೆ ಬೆಳಿಗ್ಗೆ ಎದ್ದೇಳುತ್ತೆವಾ ಎಂದು ಗೊತ್ತಿಲ್ಲ. ಶುರು ಮಾಡಿ. ಕೆಲವೊಮ್ಮೆ ಯಾವುದೋ ಕೆಲಸ ಬಂದಾಗ ಇನ್ನೇನು 2 ತಿಂಗಳಲ್ಲಿ ವರ್ಷಾನೇ ಮುಗಿಯತ್ತದೆ ಎಂದು ಮುಂದಿನ ವರ್ಷ ಮಾಡಿದರೆ ಆಯಿತು ಎಂದು ಮುಂದಕ್ಕೆ ಹಾಕಬೇಡಿ. ಒಳ್ಳೆಯದನ್ನು ಮಾಡುವುದೇ ಆದರೆ ಯಾಕೆ ಮುಂದಕ್ಕೆ ತಳ್ಳಬೇಕು. ಈಗಲೇ ಬದಲಾಗಿ ನಾಳೆಗೋಸ್ಕರ ಕಾಯೋದು ಬೇಡ, ನಾಳೆನೇ ನಮಗೋಸ್ಕರ ಬೇಗ ಬರಲಿ ಎನ್ನುವ ಮನೋಭಾವ ಇರಬೇಕು. ಆಗುವುದೆಲ್ಲ ಒಳ್ಳೆಯ ಕಾರಣಕ್ಕೆ ಎಂದು ನಂಬಿ ತಾಳ್ಮೆಯಿಂದ ಕಾಯಿರಿ. ಅವಶ್ಯವಾಗಿ ನಿಮ್ಮಿಂದ ಯಾವುದೋ ರೀತಿಯಲ್ಲಿ ಒಂದು ಒಳ್ಳೆಯ ಬದಲಾವಣೆ ತರುವ ಕೆಲಸ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದರೆ ತಡ ಮಾಡಬೇಡಿ, ಈಗಲೇ ಶುರು ಮಾಡಿ. ಕೆಲವೊಮ್ಮೆ ನಾಳೆ ಏನು ಆಗುತ್ತದೆ ಎಂದು ಗೊತ್ತಿರಲ್ಲ. ಇನ್ನೂ ಮುಂದಿನ ವರ್ಷದ ಬಗ್ಗೆ ಮಾತನಾಡುವುದು ಯಾಕೆ? ಈಗಿನ ಕ್ಷಣವನ್ನು ಅನುಭವಿಸಿ. ಖುಷಿಯಿಂದ ಇರಿ.
ಬದಲಾವಣೆ ಎನ್ನುವುದು ಸುಲಭ ಕಾರ್ಯವಲ್ಲ. ಆದರೆ ಅದು ಯಾವಾಗಲೂ ಸಾಧ್ಯವಾಗುವಂತಹ ಸಂಗತಿ. ಅವಶ್ಯವಾಗಿ ಈಗಿನ ಬದಲಾವಣೆ ಭವಿಷ್ಯದ ಬದಲಾವಣೆಯನ್ನೆ ಮಾಡಬಹುದು ಯಾರಿಗೊತ್ತು? ಹೊಸ ವರ್ಷದಲ್ಲಿ ಮಾಡಬಹುದಾದ ವಿಷಯಗಳ ಕುರಿತು ಸಂಕಲ್ಪವಿರಲಿ. ಆದರೆ ತಡ ಬೇಡ. ಪ್ರತಿ ಕ್ಷಣವೂ ನಿಮ್ಮದು. ಅದೇ ನಿಮ್ಮ ಕೊನೆಕ್ಷಣ ಎಂದು ಅಂದುಕೊಂಡು ಮುಂದುವರೆಯಿರಿ.
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!