Latest

ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

Published

on

Share this

ಚಂಡಿಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ.

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ  (PPCC) ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಪಕ್ಷದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಮನುಷ್ಯನ ಸ್ವಭಾವದ ಕುಸಿತವು ರಾಜಿ ಮೂಲೆಯಿಂದ ಹುಟ್ಟಿಕೊಂಡಿದೆ. ಪಂಜಾಬ್‍ನ ಭವಿಷ್ಯ ಮತ್ತು ಪಂಜಾಬ್‍ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆಯನ್ನು ಮುಂದುವರಿಸುತ್ತೇನೆ ಎಂದು ನವಜೋತ್ ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿಗೆ ಮುನ್ನ ಅವರ ಮುಂದಿನ ಕ್ರಮದ ಬಗ್ಗೆ ಊಹಾಪೋಹಗಳ ನಡುವೆಯೇ ಸಿಧು ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 18 ರಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆರಾಜೀನಾಮೆ ನೀಡಿದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊದಲ ರಾಜಧಾನಿಗೆ ಭೇಟಿ ಇದಾಗಲಿದೆ. ಪಂಜಾಬ್ ಕಾಂಗ್ರೆಸ್‍ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

2004ರಲ್ಲಿ ಬಿಜೆಪಿ ಸೇರಿದ್ದ ಸಿಧು ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. 2004, 2009 ರಲ್ಲಿ ಸಿಧು ಜಯಗಳಿಸಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ಅಮೃತಸರದ ಟಿಕೆಟ್ ನೀಡಲಾಗಿತ್ತು. ಇದರಿಂದ ಬಹಿರಂಗವಾಗಿ ಬಂಡಾಯ ಸಾರಿದ್ದ ಸಿಧು ಬಿಜೆಪಿಯನ್ನು ತೊರೆದು 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದನ್ನೂ ಓದಿ:  ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

2017ರಲ್ಲಿ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಸಿಧು ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ಆಸೆಗೆ ಕೊಕ್ಕೆ ಹಾಕಿದ್ದರು. ಆದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಇಷ್ಟ ಇಲ್ಲದೇ ಇದ್ದರೂ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಇಲ್ಲಿಂದ ಸಿಧು ಮತ್ತು ಅಮರಿಂದರ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು

2019ರ ಲೋಕಸಭೆ ಚುನಾವಣಾ ಸಮಯದಲ್ಲಿ ಸಿಧು ಪತ್ನಿ ನವಜೋತ್ ಕೌರ್ ಚಂಡೀಗಢ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದಕ್ಕೆ ಅಮರಿಂದರ್ ಕಾರಣ ಎಂದು ಆರೋಪಿಸುವುದರೊಂದಿಗೆ ಸಂಘರ್ಷ ಮತ್ತಷ್ಟು ಜಾಸ್ತಿಯಾಯಿತು. 2019ರ ಜುಲೈನಲ್ಲಿ ಸಿಧು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕವೂ ಪಂಜಾಬ್ ಸರ್ಕಾರ, ಅಮರಿಂದರ್ ವಿರುದ್ಧ ಸಿಧು ಟೀಕೆ ಮುಂದುವರಿಸಿದರು. ಈ ನಡುವೆ ಪಂಜಾಬ್‍ನಲ್ಲಿ ಬಲ ಜಾಸ್ತಿ ಆಗುತ್ತಿದ್ದು, ಸಿಧು ಆಪ್ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡತೊಡಗಿತು. ಇದನ್ನೂ ಓದಿ: ಸಿಎಂಗೆ ಮುಖ ತೋರಿಸಲು ಆಗುತ್ತಿಲ್ಲ: ಶಾಸಕ ಹರ್ಷವರ್ಧನ್

ಮುಂದಿನ ವಿಧಾಸಭಾ ಚುನಾವಣೆಯಲ್ಲಿ ನಾಯಕರೇ ಬಡಿದಾಡುವುದು ಬೇಡ ಎಂದು ತೀರ್ಮಾನಿಸಿ ಸಿಧು ಆಸೆಯಂತೆ ಅವರನ್ನು ಹೈಕಮಾಂಡ್ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತನ್ನ ವಿರುದ್ಧವೇ ಬಂಡಾಯ ಸಾರಿದ್ದ ಸಿಧುವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಮರಿಂದರ್ ಸಿಟ್ಟಾಗಿದ್ದರು. ಈ ನಡುವೆ ಸಿಧು ಸಲಹೆಗಾರರಾಗಿದ್ದ ಮಾಲ್ವಿಂದರ್ ಸಿಂಗ್ ಕಾಶ್ಮೀರ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಅಮರಿಂದರ್ ಅವರನ್ನು ವಜಾ ಮಾಡುವಲ್ಲಿ ಯಶಸ್ವಿಯಾಗಿದ್ದರು. ತನ್ನ ಆಪ್ತನನ್ನು ವಜಾ ಮಾಡಿದ ವಿಚಾರದಲ್ಲಿ ಸಿಟ್ಟಾಗಿದ್ದ ಸಿಧು ಅಮರಿಂದರ್ ಆಡಳಿತದ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತಲೇ ಇದ್ದರು.

ಪಂಜಾಬ್‍ನಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅಮರಿಂದರ್ ಸಿಂಗ್ ಅವರನ್ನು ಕೆಳಗಡೆ ಇಳಿಸಲೇ ಬೇಕು ಎಂದು ಸಿಧು ಬಣ ಹೈಕಮಾಂಡ್‍ಗೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತರಿಕ ಸಮೀಕ್ಷೆಯನ್ನು ಮಾಡಿತ್ತು ಎನ್ನಲಾಗುತ್ತಿದೆ. ಕೊನೆಗೆ ಹಲವು ನಾಯಕರ ಅಪಸ್ವರಕ್ಕೆ ಮಣಿದ ಕಾಂಗ್ರೆಸ್ ಬಿಜೆಪಿಯಂತೆ ಅಮರಿಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಹೀಗಾಗಿ ಕೊನೆಗೆ ಅಮರಿಂದರ್ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಸಿಧು ಸಹ ಅಧ್ಯಕ್ಷ ಪಟ್ಟಕ್ಕೆ ರಾಜೀನಾಮೆ ನೀಡಿ ಕುತೂಹಲ ಮೂಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications