– ರಾಜ್ಯ ಸರ್ಕಾರದ ಕಮಿಷನ್ ದಂಧೆಯ ಒಂದು ಭಾಗವೇ ಈ ಘಟನೆ: ವಿಪಕ್ಷ ನಾಯಕ
ಕೋಲಾರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ನೀಡಿ, ಮಕ್ಕಳಿಂದ ಮಲದ ಗುಂಡಿ ಕ್ಲೀನ್ (Septic Tank) ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ (A.Narayanaswmy), ಸಂಸದ ಮುನಿಸ್ವಾಮಿ (Muniswamy), ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh), ಶಾಸಕ ಕೆ.ವೈ.ನಂಜೇಗೌಡ, ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್
Advertisement
Advertisement
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ವಿಷಯವೇ ಇಲ್ಲ. ಈಗಾಗಲೇ ನಾಲ್ಕು ಜನರ ಮೇಲೆ ಎಫ್ಐಆರ್ ಮಾಡಲಾಗಿದೆ. ಇಬ್ಬರನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸುತ್ತೇವೆ. ಇದು ಹಣ ಹಂಚಿಕೊಳ್ಳುವ ವಿಚಾರಕ್ಕೆ ನಡೆದಿರುವ ಗಲಾಟೆ. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಎರಡು ಗುಂಪುಗಳಾಗಿದ್ದು, ಅದಾದ ನಂತರ ಇಷ್ಟೆಲ್ಲಾ ಘಟನೆ ನಡೆದಿದೆ. ಒಂದು ತಿಂಗಳ ಹಿಂದಷ್ಟೇ ವಸತಿ ಶಾಲೆಯ ನಿರ್ವಹಣೆಗೆಂದು 25 ಸಾವಿರ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲೂ ಗಲಾಟೆ ಮಾಡಿಕೊಂಡಿದ್ದಾರೆ. ದುಡ್ಡು ಕೊಟ್ಟು ಕ್ಲೀನ್ ಮಾಡಿಸೋದೇಕೆ ಅಂತಾ ಮಕ್ಕಳ ಕೈಯಿಂದ ಕ್ಲೀನ್ ಮಾಡಿಸಿದ್ದಾರೆ. ಇಲ್ಲೂ ಹಣ ಹೊಡೆಯುವ ಕಮಿಷನ್ ದಂಧೆ, ಮಕ್ಕಳಿಂದ ಇಂಥ ಹೇಯ ಕೃತ್ಯ ಮಾಡಿಸಿರುವವರ ವಿರುದ್ದ ನಾವು ತೆಗೆದುಕೊಳ್ಳುವ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ತಿಳಿಸಿದರು.
Advertisement
ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಛಲವಾಧಿ ನಾರಾಯಣಸ್ವಾಮಿ, ಭಾರತಿಶೆಟ್ಟಿ ಹಾಗೂ ತೇಜಸ್ವಿನಿ ರಮೇಶ್ ಸೇರಿದಂತೆ ಬಿಜೆಪಿ ನಾಯಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಆರ್.ಅಶೋಕ್, ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಈ ಘಟನೆ. ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇವೆ. ಕಮಿಷನ್ ದಂಧೆಯ ಒಂದು ಭಾಗವೇ ಈ ಘಟನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಕೋಲಾರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅಮಾನವೀಯ ಘಟನೆ
ಘಟನೆ ಏನು?
ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸಮಾಜ ಕಲ್ಯಾಣ ಸಚಿವರು, ಶಾಲೆಯ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕರಾದ ಮುನಿಯಪ್ಪ, ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಅವರನ್ನು ಅಮಾನತು ಮಾಡಲು ಸೂಚಿಸಿದ್ದರು. ಅಲ್ಲದೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿತ್ತು. ನಂತರ ಪ್ರಾಂಶುಪಾಲೆ ಭಾರತಮ್ಮ ಮತ್ತು ಮುನಿಯಪ್ಪರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಮಾಸ್ತಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.