ರೆಪೋ ದರ ಕಡಿತ – ಇಳಿಕೆಯಾಗಲಿದೆ ಇಎಂಐ

Public TV
2 Min Read
RBI a

ಮುಂಬೈ: ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ರೆಪೋ ದರವನ್ನು ಕಡಿತಗೊಳಿಸಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ರೆಪೋ ದರದಲ್ಲಿ ಶೇ.25 ಮೂಲಾಂಕದಷ್ಟು ಕಡಿತಗೊಂಡಿದೆ. ರೆಪೋ ದರ ಕಡಿತಗೊಂಡ ಪರಿಣಾಮ ಬ್ಯಾಂಕಿಗೆ ಪಾವತಿಸುವ ಇಎಂಐ ಇಳಿಕೆಯಾಗಲಿದೆ.

ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.25 ರಿಂದ ಶೇ.6ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಹೊಸದಾಗಿ ನೇಮಕಗೊಂಡಿರುವ ಶಕ್ತಿಕಾಂತ್‍ದಾಸ್ ಅವರ ನೇತೃತ್ವದಲ್ಲಿ ಫೆಬ್ರವರಿಯಲ್ಲಿ ನಡೆದ ಮೊದಲ ಎಂಪಿಸಿ ಸಭೆಯಲ್ಲಿ ರೆಪೋ ದರ ಶೇ.25 ಮೂಲಾಂಕ ಕಡಿತಗೊಂಡಿತ್ತು. 17 ತಿಂಗಳ ಬಳಿಕ ರೆಪೋ ದರವನ್ನು ಆರ್‌ಬಿಐ ಕಡಿತಗೊಳಿಸಿತ್ತು.

ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಮುಂದೆ ರೆಪೋ ದರ ಇಳಿಕೆ ಸಂಬಂಧಿಸಿದಂತೆ ಮಂಡನೆಯಾಗಿದ್ದ ಪ್ರಸ್ತಾವನೆಗೆ 4:2 ರಷ್ಟು ಮತ ಬಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಕೆಲ್ ಪಾತ್ರ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರು ನಿರ್ಧಾರರ ಪರ ಮತ ಹಾಕಿದರೆ, ಡೆಪ್ಯೂಟಿ ಗವರ್ನರ್ ವಿರಾಳ್ ಆಚಾರ್ಯ ಮತ್ತು ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದರು.

2019-20ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.8-ಶೇ.7.1 ರಷ್ಟು ಇದ್ದರೆ, ಎರಡನೇ ತ್ರೈಮಾಸಿಕದಲ್ಲಿ ಶೇ.7.3- ಶೇ.7.4 ರಷ್ಟು ಪ್ರಗತಿ ಸಾಧಿಸಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ರೆಪೋ ದರ ಇಳಿಕೆಯಾದ್ದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದರಿಂದ ಮನೆ ಖರೀದಿ ಮತ್ತು ಸಣ್ಣ ಉದ್ಯಮಿಗಳಿಗೆ ಸಹಾಯವಾಗಲಿದೆ.

ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.

ರಿವರ್ಸ್ ರೆಪೋ : ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವಸ್ರ್ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

SHAKTHI KANTH DAS NEW RBI GOVERNOR

Share This Article
Leave a Comment

Leave a Reply

Your email address will not be published. Required fields are marked *