DavanagereDistrictsKarnatakaLatestMain Post

ಮೀಸಲಾತಿ ವಿಚಾರ – ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟ ವಾಲ್ಮೀಕಿ ಶ್ರೀಗಳು

ದಾವಣಗೆರೆ: ಫೆಬ್ರವರಿಯಲ್ಲಿ ನಡೆಯುವ ನಾಲ್ಕನೇ ವಾಲ್ಮೀಕಿ ಜಾತ್ರೆ ವೇಳೆಗೆ 7.5 ಮೀಸಲಾತಿ ಪ್ರಕಟಿಸಬೇಕು. ಮೀಸಲಾತಿ ನೀಡದಿದ್ದರೆ ಮುಂದಾಗುವ ಬೆಳವಣೆಗೆಗೆ ನಾವು ಜವಾಬ್ದಾರರಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಡೆಡ್ ಲೈನ್ ನೀಡುವುದರ ಜೊತೆಗೆ ಖಡಕ್ ಎಚ್ಚರಿಕೆ ನೀಡಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕ ಸಮಾಜದ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು ಎಂದರೆ ಮೀಸಲಾತಿ ಹೆಚ್ಚಳ ಮಾಡಬೇಕು. ಇದು ಸಮಸ್ತ ವಾಲ್ಮೀಕಿ ಸಮಾಜದ ಒತ್ತಾಯವಾಗಿದೆ ಹಾಗೂ ಬಹುದಿನ ಬೇಡಿಕೆಯಾಗಿದೆ. ಮೂರು ವಾಲ್ಮೀಕಿ ಜಾತ್ರೆಗಳಲ್ಲಿ ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ವಾಲ್ಮೀಕಿ ಜಾತ್ರೆಯಲ್ಲಿ ನಾವು ಕೇಳುತ್ತಾ ಕೂರುವುದಿಲ್ಲ. ಕಳೆದ ಮೂರನೇ ವಾಲ್ಮೀಕಿ ಜಾತ್ರೆಯಲ್ಲಿ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದವರು ಈಗ ಎಲ್ಲಿ ಇದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ನವರ ಬಗ್ಗೆ ಪರೋಕ್ಷವಾಗಿ ವಾಲ್ಮೀಕಿ ಶ್ರೀ ಗಳು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಚಿವರ ಪುತ್ರನ ಆರತಕ್ಷತೆಯಲ್ಲಿ ಬಂದೂಕಿನಿಂದ ಗುಂಡು ಸಿಡಿಸಿ ಸಂಭ್ರಮ

ಈ ಸರ್ಕಾರಗಳು ಮೀಸಲಾತಿ ನೀಡುತ್ತೇವೆ ಎಂದು ವಾಲ್ಮೀಕಿ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡು ಯಾಮಾರಿಸುತ್ತಾ ಬಂದಿವೆ. ಆದರೆ ಈ ನಾಲ್ಕನೇ ವಾಲ್ಮೀಕಿ ಜಾತ್ರೆಯೊಳಗೆ ಮೀಸಲಾತಿ ನೀಡದಿದ್ದರೆ ಅದರ ಪರಿಣಾಮ ಬೇರೆ ಇರುತ್ತದೆ. ಎರಡು ಬಾರಿ ಸಮಾಜ ನನ್ನ ಮಾತು ಕೇಳಿತು, ನಾಳೆ ನಾನು ನನ್ನ ಸಮುದಾಯ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ದನಾಗಿರುತ್ತೇನೆ. ಆಗ ನಮ್ಮ ಮೇಲೆ ಗೂಬೆ ಕೂರಿಸಲು ಸರ್ಕಾರ ಬರಬಾರದು ಎಂದು ಹೇಳಿದರು. ಇದನ್ನೂ ಓದಿ: ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್‍ನಲ್ಲಿ ಬಾಂಬ್ – ಹುಸಿ ಕರೆಗೆ ಪ್ರಯಾಣಿಕರು ಕಂಗಾಲು

ಇಂದು ಬೆಳಗಾವಿಯ ಸಂಕಮ್ ಹೋಟೆಲ್ ನಲ್ಲಿ ನಾಯಕ ಸಮುದಾಯದ ಶಾಸಕರ ಜೊತೆ ಸಭೆ ಇದೆ. ಎಲ್ಲಾ ಪಕ್ಷದ ನಾಯಕ ಸಮುದಾಯದ ಶಾಸಕರು ಸಂಸದರು ಸಚಿವರು ಭಾಗವಹಿಸುತ್ತಾರೆ. ಈ ಸಭೆ ನಂತರ ಬೆಳವಣೆಗೆ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ಈಗಾಗಲೇ ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ತರಿಸಿಕೊಂಡು ಸಬ್ ಕಮಿಟಿ ಮಾಡಿದೆ. ಈಗ ಅದನ್ನು ಉನ್ನತ ಕಮಿಟಿಗೆ ಹಾಕಿದ್ದಾರೆ. ಆದ್ದರಿಂದ ಇಂದು ನಡೆಯುವ ಸಭೆಯಲ್ಲಿ ಅದನ್ನು ಕೂಡ ಪ್ರಸ್ತಾಪ ಮಾಡುತ್ತೇವೆ ಎಂದರು.

Leave a Reply

Your email address will not be published.

Back to top button