ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ (Kannadigas) ಉದ್ಯೋಗ ಮೀಸಲಾತಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗ ಮೀಸಲಾತಿಗೆ ತೀರ್ಮಾನಿಸಿದೆ. ನಿಯಮ ಉಲ್ಲಂಘಿಸಿದ್ರೆ 25 ಸಾವಿರ ತನಕ ದಂಡ ವಿಧಿಸುವ ಅಸ್ತ್ರ ಪ್ರಯೋಗ ಮಾಡಲಾಗ್ತಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಐಟಿಬಿಟಿ ವಲಯದಲ್ಲಿ ಕೆಲ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕೈಗಾರಿಕೆಗಳ ಉದ್ಯೋಗಗಳು ಉತ್ತರ ಭಾರತದ ರಾಜ್ಯಗಳ ಪಾಲಾಗುತ್ತಿರುವ ಆತಂಕ ವ್ಯಕ್ತವಾಗಿತ್ತು. ಹಾಗಾಗಿ ರಾಜ್ಯದ ಭೂಮಿ, ಮೂಲಭೂತ ಸೌಕರ್ಯಗಳನ್ನ ಪಡೆದ ಕೈಗಾರಿಕೆಗಳಲ್ಲಿ, ಹಲವು ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂಬ ಕೂಗು ಎದ್ದಿತ್ತು. ಹಾಗಾಗಿ ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳು ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಶುಕ್ರವಾರ ಅಥವಾ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ -2024 ಮಂಡನೆ ಆಗಲಿದೆ. ಕಾರ್ಮಿಕ ಇಲಾಖೆಯಿಂದ ವಿಧೇಯಕ ಮಂಡನೆಗೆ ಮುಂದಾಗಿದ್ದು, ಮೊನ್ನೆ ನಡೆದ ಸಂಪುಟ ಸಭೆಯಲ್ಲೂ ವಿಧೇಯಕ ಮಂಡನೆಗೆ ಒಪ್ಪಿಗೆ ಸಿಕ್ಕಿದೆ. ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಸೂದೆಯಲ್ಲಿ ಏನಿದೆ? ಕನ್ನಡಿಗರಿಗೆ ಅರ್ಹತೆ ಹೇಗೆ? ಯಾವ ಹುದ್ದೆಯಲ್ಲಿ ಎಷ್ಟು?
ಮಸೂದೆಯಲ್ಲೇನಿದೆ?
ಆಡಳಿತಾತ್ಮಕ ಹುದ್ದೆಗೆ 50% (ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್ ಇತರೆ ಉನ್ನತ ಹುದ್ದೆಗಳು)
ಆಡಳಿತೇತರ ಹುದ್ದೆಗೆ 75% (ಕ್ಲರ್ಕ್, ಕೌಶಲ ರಹಿತ, ಅರೆ ಕೌಶಲ ಗುತ್ತಿಗೆ ನೌಕರ)
* ಉಲ್ಲಂಘಿಸಿದರೆ 25 ಸಾವಿರ ರೂ. ವರೆಗೆ ದಂಡ. ಕನಿಷ್ಟ 10 ಸಾವಿರ, ಗರಿಷ್ಟ 25 ಸಾವಿರ
* ದಂಡ ವಿಧಿಸಿದ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ
ಕನ್ನಡಿಗರಿಗೆ ಅರ್ಹತೆ ಹೇಗೆ?
* ಕರ್ನಾಟಕದಲ್ಲಿ ಹುಟ್ಟಿರಬೇಕು.
* ಕರ್ನಾಟಕದಲ್ಲಿ 15 ವರ್ಷ ವಾಸವಿರಬೇಕು.
* ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು.
* ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದನ್ನೂ ಓದಿ: ನೈಸ್ ರಸ್ತೆ ಟೋಲ್ ದರ ಏರಿಕೆ ಬೆನ್ನಲ್ಲೇ ಶಾಕ್ – ಟೋಲ್‌ನಲ್ಲಿ ಸಂಚರಿಸೋ BMTC ಬಸ್ ಪ್ರಯಾಣ ದರ ಏರಿಕೆ!
ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ ಕೊಟ್ಟಿರುವುದನ್ನ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಹೇಳಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರಕ್ಕೆ ಐಟಿ-ಬಿಟಿ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂದರ್ ಷಾ ಟ್ವೀಟ್ ಮಾಡಿದ್ದು, ಟೆಕ್ ಹಬ್ ಆಗಿರೋ ನಮಗೆ ನುರಿತ ಪ್ರತಿಭೆಗಳು ಬೇಕಾಗಿವೆ. ನಮಗೆ ಲೋಕಲ್ ಅನ್ನೋದಕ್ಕಿಂತ ನುರಿತ ಪ್ರತಿಭೆಗಳು ಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದು, ಇದು ತಾರತಮ್ಯ, ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಯಾರೆಂದು ಸರ್ಕಾರ ಪ್ರಮಾಣೀಕರಿಸುತ್ತದೆಯೇ? ಅನಿಮಲ್ ಫಾರ್ಮ್ನಲ್ಲಿರುವಂತೆ ಇದು ಫ್ಯಾಸಿಸ್ಟ್ ಮಸೂದೆಯಾಗಿದೆ. ಅದನ್ನು ನಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಇದೇ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಿ ಒಪ್ಪಿಗೆ ಸಿಗುವ ಸಾಧ್ಯತೆ ಇದ್ದು, ಕನ್ನಡಪರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದರೆ, ಐಟಿಬಿಟಿ ವಲಯದ ಉದ್ಯಮಿಗಳು ವಿರೋಧಿಸುತ್ತಿದ್ದು, ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.