Connect with us

International

ಚೀನಾ ಅಲ್ಲ, ಭಾರತವೇ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಅಂತಿದ್ದಾರೆ ಈ ಸಂಶೋಧಕ

Published

on

-ಪ್ರಕೃತಿ ಸಿಂಹ
ನವದೆಹಲಿ: ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಯಾವುದು? ಈ ಪ್ರಶ್ನೆಗೆ ಸಾಕಷ್ಟು ವರ್ಷಗಳಿಂದಲೂ ಚೀನಾ ಅಂತ ಸರಳವಾಗಿ ಉತ್ತರಿಸುತ್ತಿದ್ವಿ. ಆದ್ರೆ ಈಗ ಚೀನಾದ ಅಧಿಕೃತ ಅಂದಾಜು ಜನಸಂಖ್ಯೆಯೇ ತಪ್ಪು. ಆದ್ದರಿಂದ ಭಾರತವೇ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂದು ಸಂಶೋಧಕರೊಬ್ಬರು ಹೇಳಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

1. ಯಾರು ಹೇಳಿದ್ದು?
ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರಾದ ಯೀ ಫುಕ್ಸಿಯಾನ್ ಸೋಮವಾರದಂದು ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಹೇಳಿಕೆಯನ್ನ ನೀಡಿದ್ದಾರೆ.

2. ಅಂಕಿ ಅಂಶ ಏನು ಹೇಳುತ್ತೆ?
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಚೀನಾದಲ್ಲಿ 1991ರಿಂದ 2016ರವರೆಗೆ ಆಗಿರುವ ಜನನದ ಸಂಖ್ಯೆ 37.76 ಕೋಟಿ. ಆದ್ರೆ ಅಧಿಕೃತ ಅಂಕಿ ಅಂಶದ ಪ್ರಕಾರ 46.48 ಕೋಟಿ ಅಂತ ಇದೆ. ಇದರ ಪ್ರಕಾರ ಚೀನಾದ ಅಧಿಕೃತ ಒಟ್ಟು ಜನಸಂಖ್ಯೆ ಅಂದಾಜು 138 ಕೋಟಿ. ಇದು ತಪ್ಪು ಲೆಕ್ಕವಾಗಿದ್ದು, ಅದರ ಬದಲು ಚೀನಾದ ಒಟ್ಟು ಜನಸಂಖ್ಯೆಯಲ್ಲಿ 9 ಕೋಟಿಯಷ್ಟು ಜನಸಂಖ್ಯೆ ಕಡಿಮೆ ಇರಬೇಕು. ಹೀಗಾದಾಗ ಚೀನಾದ ಜನಸಂಖ್ಯೆ 129 ಕೋಟಿಯಾಗುತ್ತದೆ. ಇದು ಭಾರತದ 132 ಕೋಟಿ ಜನಸಂಖ್ಯೆ ಅಂದಾಜಿಗಿಂತಲೂ ಕಡಿಮೆ ಎಂದು ಯೀ ಹೇಳಿದ್ದಾರೆ.

3. ಇದರ ಪರಿಣಾಮ ಏನು?
ಚೀನಾ, ಭಾರತ ಹಾಗೂ ಇನ್ನಿತರ ದೇಶಗಳ ಮಾಧ್ಯಮಗಳು ಬೇಗನೆ ಈ ಸುದ್ದಿಯನ್ನ ಪ್ರಕಟಿಸಿವೆ. ಯೀ ಅವರು ಹೇಳುತ್ತಿರುವುದು ನಿಜವೇ ಆದರೆ ಇದರ ಪರಿಣಾಮಗಳು ಮಹತ್ವದ್ದಾಗಿರಲಿವೆ. ಭಾರತ ಚೀನಾದ ಜನಸಂಖ್ಯೆಯನ್ನ ಮೀರಿಸಿದೆ ಎಂದು ಮಾತ್ರವಲ್ಲ ಚೀನಾದ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕ್ಷೀಣತೆ ಹಲವರು ಅಂದುಕೊಂಡಿದ್ದಕ್ಕಿಂತ ಕೆಟ್ಟದಾಗಿದ್ದು, ಸಾರ್ವಜನಿಕವಾಗಿ ಬಹಿರಂಗಪಡಿಸದೆ ಮುಚ್ಚಿಡಲಾಗಿತ್ತು ಎಂಬುದನ್ನು ಅರ್ಥೈಸುತ್ತದೆ ಎಂದು ವರದಿಯಾಗಿದೆ. 2022ರ ವೇಳೆಗೆ ಭಾರತ ಚೀನಾದ ಜನಸಂಖ್ಯೆಯನ್ನ ಮೀರಿಸಲಿದೆ ಎಂದು ಅಮೆರಿಕ ಈ ಹಿಂದೆಯೇ ಅಂದಾಜಿಸಿತ್ತು.

4. ಈ ಹಿಂದೆಯೇ ಹೇಳಿದ್ರಾ?
ಈ ಬಗೆಗಿನ ವಿವಾದ ಆಶ್ಚರ್ಯವೇನೂ ಅಲ್ಲ ಎಂದು ಯೀ ಹೇಳಿದ್ದಾರೆ. ಚೀನಾದ ಅಧಿಕೃತ ಜನಸಂಖ್ಯೆ ಅಂದಾಜು ತಪ್ಪಾಗಿದೆ ಎಂಬುದನ್ನ ನನ್ನ 2013ನೇ ಆವೃತ್ತಿಯ ಪುಸ್ತಕ ‘ಬಿಗ್ ಕಂಟ್ರಿ ವಿತ್ ಎಂಪ್ಟಿ ನೆಸ್ಟ್’ನಲ್ಲಿ ಉಲ್ಲೇಖಿಸಿದ್ದೆ ಎಂದು ಯೀ ಹೇಳಿದ್ದಾರೆ. ಅಲ್ಲದೆ ಅದಕ್ಕೂ ಮುಂಚಿನ ಜನಸಂಖ್ಯೆ ಅಂದಾಜು ಕೂಡ ತಪ್ಪಾಗಿದೆ. 2003ರಲ್ಲಿ ಚೀನಾದ ಅಧಿಕೃತ ಜನಸಂಖ್ಯೆ ಪ್ರಕಟಣೆಯಲ್ಲಿನ ದತ್ತಾಂಶ ನೈಜ ಜನಸಂಖ್ಯೆಗಿಂತ ಹೆಚ್ಚಿದೆ ಎಂಬುದು ನನಗೆ ಗೊತ್ತಿತ್ತು ಎಂದು ಯೀ ಹೇಳಿದ್ದಾರೆ.

5. ಯಾರು ಈ ಸಂಶೋಧಕ ಯೀ?
ಚೀನಾದ ಹುನಾನ್ ಪ್ರಾಂತ್ಯದಲ್ಲಿ ಜನಿಸಿದ ಯೀ 1999ರಲ್ಲಿ ಅಮೆರಿಕಕ್ಕೆ ಹೋಗಿ ನೆಲೆಸಿದ್ರು. ಮಿನೆಸ್ಸೋಟಾ ಟ್ವಿನ್ ಸಿಟೀಸ್‍ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡಿದ್ರು. ನಂತರ ವಿಸ್ಕಾನ್ಸಿನ್‍ನ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಿ ಬಳಿಕ 2002ರಲ್ಲಿ ವಿಜ್ಞಾನಿಯಾಗಿ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯಕ್ಕೆ ಹೋದ್ರು. ಚೀನಾದ ಕುಟುಂಬ ಯೋಜನೆ ಹಾಗೂ ಒಂದೇ ಮಗು ನೀತಿಯನ್ನು ಯೀ ಟೀಕಿಸಿದ್ರು.

6. ಚೀನಾದ ಕುಟುಂಬ ಯೋಜನೆಗಳಿಂದ ಏನು ನಷ್ಟ?
ಚೀನಾದ ಕುಟುಂಬ ಯೋಜನೆಗಳಿಂದ ದೇಶದ ಆರ್ಥಿಕ ಬೆಳವಣಿಗೆ ಸೀಮಿತಗೊಳ್ಳುತ್ತಿದೆ. ಇದರಿಂದ ಅಮೆರಿಕಗೆ ಸ್ಪರ್ಧೆಯೊಡ್ಡಲು ಸಾಧ್ಯವೇ ಇಲ್ಲ. ಚೀನಾದಲ್ಲಿ ಶೀಘ್ರವೇ ಗುಣಾತ್ಮಕ ಜನನ ಪ್ರಮಾಣ ಇರಲಿದ್ದು, ಮಿತ್ರ ರಾಷ್ಟ್ರ ಜಪಾನ್‍ನಂತೆ ಜನಸಂಖ್ಯೆ ಕ್ಷೀಣಿಸಲಿದೆ ಎಂದು ಯೀ ತಮ್ಮ ಬರವಣಿಗೆಗಳಲ್ಲಿ ಹೇಳಿದ್ದರು.

7. ಯೀ ವಾದಕ್ಕೆ ಚೀನಾ ಹೇಳೋದೇನು?
ಚೀನಾದ ಪ್ರಜೆಯಾಗಿಯೇ ಉಳಿದಿರೋ ಯೀ ತಮ್ಮ ಅಭಿಪ್ರಾಯದಿಂದ ಚೀನಾದೊಂದಿಗೆ ಸಂಘರ್ಷವೂ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅವರ ‘ಬಿಗ್ ಕಂಟ್ರಿ ವಿತ್ ಎಂಪ್ಟಿ ನೆಸ್ಟ್’ ಪುಸ್ತಕ 2007ರಲ್ಲಿ ಮೊದಲು ಪ್ರಕಟಣೆಗೊಂಡು, ಆರಂಭದಲ್ಲಿ ಮೇನ್‍ಲ್ಯಾಂಡ್ ಚೀನಾದಲ್ಲಿ ಬ್ಯಾನ್ ಆಗಿತ್ತು. ತನ್ನ ಸಂಬಂಧಿಕರೊಬ್ಬರಿಗೆ ದೇಶದ ಆದೇಶದಂತೆ ಬಲವಂತ ಗರ್ಭಪಾತ ಮಾಡಿಸಲು ಮುಂದಾದಾಗ ಅದರಿಂದ ಪಾರಾಗಲು ಅವರಿಗೆ ಯೀ ಸಹಾಯ ಮಾಡಿದ್ರು. ಆದ್ದರಿಂದ ದೇಶಕ್ಕೆ ಮರಳಿ ಬಂದ್ರೆ ಬಂಧನ ಎದುರಿಸಬೇಕಾಗುತ್ತದೆ ಅಂತ 2010ರಲ್ಲಿ ಎಚ್ಚರಿಕೆ ನೀಡಲಾಗಿತ್ತು ಎಂದು ಯೀ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಗೆ ಹೇಳಿದ್ದಾರೆ.

ನಂತರ 2015ರಲ್ಲಿ ಯೀ ಅವರ ಕೆಲವು ವಾದಗಳನ್ನ ಚೀನಾ ಪರಿಗಣಿಸಿದಂತಿದ್ದು, ಒಂದೇ ಮಗು ನಿಯಮವನ್ನ ಕೈಬಿಟ್ಟು ಎಲ್ಲಾ ದಂಪತಿಗಳು ಇಬ್ಬರು ಮಕ್ಕಳನ್ನು ಹೊಂದಬಹುದು ಎಂದು ಹೇಳಿತು. ಕಳೆದ ವರ್ಷ ಯೀ ಚೀನಾಗೆ ಅತಿಥಿಯಾಗಿ ಭೇಟಿ ನೀಡಿದ್ದರು. ಆದ್ರೆ ಕೆಲವು ತಿಂಗಳ ನಂತರ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಮುಚ್ಚಲಾಗಿತ್ತು.

8.  ತಜ್ಞರು ಏನ್ ಹೇಳ್ತಾರೆ?
ಯೀ ಅವರ ಚೀನಾದ ಜನಸಂಖ್ಯೆ ಅಂದಾಜಿನ ಮೇಲೆ ಕೆಲವರು ಪ್ರಶ್ನೆ ಎತ್ತಿದ್ದಾರೆ. ಅವರ ಸಂಖ್ಯೆಗಳನ್ನ ಮುಖಬೆಲೆಯಂತೆ ತೆಗೆದುಕೊಳ್ಳಬಾರದು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜನಸಂಖ್ಯಾಶಾಸ್ತ್ರಜ್ಞ ವಾಂಗ್ ಫೆಂಗ್ ದಿ ಗಾರ್ಡಿಯನ್ ಪತ್ರಿಕೆಗೆ ಹೇಳಿದ್ದಾರೆ. ಚೀನಾ ಸರ್ಕಾರ ನೀಡಿರುವ ಜನಸಂಖ್ಯೆಯೇ ಸರಿಯಾಗಿದೆ ಎಂದು ವಾಂಗ್ ಅವರು ಹೇಳಿದ್ದಾರೆ. ಆದ್ರೆ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ಪ್ರಕಾರ ಸೋಮವಾರದ ಪೆಕಿಂಗ್ ವಿವಿ ಕಾರ್ಯಕ್ರಮದಲ್ಲಿ ಹಲವಾರು ತಜ್ಞರು ಸರ್ಕಾರದ ಜನಸಂಖ್ಯೆ ಅಂದಾಜು ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *