ಉಡುಪಿ: ಹಲವು ದಿನಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಹಿಂದೆಯೂ ಇದೇ ಹಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಬಾರಿ ಉರಗತಜ್ಞರ ಸಹಾಯದಿಂದ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ.
ಎರಡು ತಿಂಗಳ ಹಿಂದೆಯೂ ಕಾರ್ಕಳ ತಾಲೂಕಿನ ಜಾರ್ಕಳ, ಅರ್ಜೆಡ್ಡು ಗ್ರಾಮದಲ್ಲಿ ಈ ಕಾಳಿಂಗ ಹಾವು ಮರವೇರಿ ಕುಳಿತು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಗ್ರಾಮಸ್ಥರು ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಕಾದು ಕುಳಿತರೂ ಮರದಿಂದ ಕೆಳಕ್ಕೆ ಇಳಿಯಲೇ ಇಲ್ಲ. ಅದು ಮರದಲ್ಲೇ ಗೆಲ್ಲಿನಿಂದ ಗೆಲ್ಲಿಗೆ ಸರಿದಾಡುತ್ತಿತ್ತು. ಬೆಳಗ್ಗಿನ ಜಾವ ಅಲ್ಲಿಂದ ಕಣ್ಮರೆಯಾಗಿತ್ತು. ಬೈಲೂರು ಪೇಟೆಯಲ್ಲಿ ಗುರುವಾರ ರಾತ್ರಿ ಮತ್ತೆ ಈ ಕಾಳಿಂಗ ಸರ್ಪ ಕಾಣಿಸಿ ಕೊಂಡಿದೆ.
ಕೊಡಲೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ. ಅನಿಲ್ ಪ್ರಭು ಸ್ಥಳಕ್ಕೆ ಆಗಮಿಸಿ ಹಾವನ್ನು ಸರೆ ಹಿಡಿದಿದ್ದಾರೆ. 13 ಅಡಿಗಳಷ್ಟು ಉದ್ದ ಇರುವ ಈ ಕಾಳಿಂಗ ಸರ್ಪವನ್ನು ಗೋಣಿಗೆ ತುಂಬಿಸಲು ಯತ್ನಿಸಿದರೂ ಅದು ಹೊರಕ್ಕೆ ಬಂದು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಮತ್ತೆ ಹಾವನ್ನು ಗೋಣಿಯಲ್ಲಿ ಭದ್ರಗೊಳಿಸಲಾಯಿತು. ವಲಯ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಕಾಳಿಂಗ ಸರ್ಪವನ್ನು ಅಭಯಾರಣ್ಯಕ್ಕೆ ಬಿಡಲಾಗಿದೆ. ಸದ್ಯಕ್ಕೆ ಕಾಳಿಂಗ ಸರ್ಪ ಸೆರೆಯಿಂದ ಸ್ಥಳೀಯರಲ್ಲಿ ಆತಂಕ ದೂರವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv