ಮಡಿಕೇರಿ: 4 ದಿನಗಳ ಹಿಂದೆ ಕಣ್ಮರೆಯಾಗಿದ್ದ ವೃದ್ಧೆ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಪ್ರದೇಶದ ಪೊದರೆಯೊಂದರ ಬಳಿ ಪತ್ತೆಯಾಗಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಾಟ್ ಕಾಲೋನಿಯ 80 ವರ್ಷದ ಸೀತಮ್ಮ ಅವರನ್ನು ರಕ್ಷಿಸಲಾಗಿದೆ. ಸೀತಮ್ಮ ಸಂಬಂಧಿಕರ ಮನೆಯಿಂದ ಹೊರಟು ತಮ್ಮ ಮನೆಗೆ ಬರುತ್ತಿರುವಾಗ ದಾರಿ ಸರಿಯಾಗಿ ಗೋತ್ತಿಲ್ಲದ ಕಾರಣ ಬೆಟ್ಟ ಪ್ರದೇಶದ ಸುತ್ತಮುತ್ತ ಓಡಾಟ ನಡೆಸಿದ್ದಾರೆ. ಈ ವೇಳೆ ಕಾಡಿನ ಪೊದೆಯೊಂದರ ಬಳಿ ಆಶ್ರಯ ಪಡೆದಿದ್ರು. ನಾಲ್ಕು ದಿನಗಳಿಂದ ಮನೆಗೆ ಬರದ ಹಿನ್ನೆಲೆ ಗ್ರಾಮಸ್ಥರೆಲ್ಲಾ ಸೇರಿಕೊಂಡು ನಾಲ್ಕು ದಿನಗಳಿಂದ ಹುಡುಕಾಟ ನಡೆಸಿದ್ದಾರೆ.
ಅಚ್ಚರಿ ಎಂಬಂತೆ ಸೀತಮ್ಮ ಪೊದೆಯಲ್ಲಿ ಸಿಕ್ಕಿದ್ದಾರೆ. ಆದರೆ ಈಕೆ 4 ದಿನಗಳ ಕಾಲ ಊಟ ಮಾಡದೆ ಚಳಿ, ಮಳೆಗೆ ಬೆಟ್ಟದ ಪೊದೆಯಲ್ಲಿ ಜೀವ ಉಳಿಸಿದ್ದೇ ಗ್ರಾಮಸ್ಥರಿಗೆ ವಿಸ್ಮಯ ಮೂಡಿಸಿದೆ. ರೆವೆನ್ಯೂ ಇಲಾಖೆ ಸಿಬ್ಬಂದಿ ಪೂಣಚ್ಚ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ಮತ್ತಿತರರು ಒಟ್ಟಾಗಿ 4 ದಿನಗಳಿಂದ ಸುತ್ತಮುತ್ತಲಿನ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು
ಮನೆಯಿಂದ ಸುಮಾರು 2 ಕಿ.ಮೀ. ದೂರದ ಬೆಟ್ಟದ ಪೊದೆಯಲ್ಲಿ ಸೀತಮ್ಮ ಪತ್ತೆಯಾಗಿದ್ದಾರೆ. ಅವರನ್ನು ಮನೆಗೆ ಹೊತ್ತು ತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಾಹನದಲ್ಲಿ ನಾಪೋಕ್ಲುಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ವೃದ್ಧೆ ಚೇತರಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಸಂಸೆ ವ್ಯಕ್ತಪಡಿಸಿದ್ದಾರೆ.