ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಮಾಸೂರು ಗ್ರಾಮದಲ್ಲಿ 71ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.
71ನೇ ಗಣರಾಜ್ಯೋತ್ಸವ ಅಂಗವಾಗಿ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ 100 ಮೀಟರ್ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಲಾಗಿದೆ. ಮಾಸೂರು ಗ್ರಾಮದ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ, ಬಸ್ ನಿಲ್ದಾಣ ಸೇರಿದಂತೆ ಗ್ರಾಮದಲ್ಲಿ ಮೂರು ಕಿ.ಲೋ ಮೀಟರ್ ವರೆಗೂ ಮೆರವಣಿಗೆ ಮಾಡಲಾಗಿದೆ.
ನೂರು ಮೀಟರ್ ತ್ರಿವರ್ಣ ಧ್ವಜದ ಮೆರವಣಿಗೆ ನೋಡುಗರ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ಸಂಸ್ಥೆಯ ಅಧ್ಯಕ್ಷ ಮಂಜುನಾಥ ತಳವಾರ ಧ್ವಜಾರೋಹಣ ನೆರವೇರಿಸಿದ್ದಾರೆ. ಗ್ರಾಮದ ಪ್ರಮುಖ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪ್ರಮುಖ ಗಣ್ಯರು, ಶಾಲೆಯ ಸಿಬ್ಬಂದಿ ವರ್ಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.