ಜ.26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನ (Republic Day) ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮ, ದೇಶಭಕ್ತಿಗಳಿಂದ ಆಚರಿಸುತ್ತೇವೆಯೋ ಅಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನೂ ಆಚರಿಸುತ್ತೇವೆ.
ಆ.15 ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ, ಜ.26 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ. ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ದಿನ. ಈ ಬಾರಿ ಭಾರತ 76ನೇ ಗಣರಾಜ್ಯೋತ್ಸವ ದಿನವನ್ನು ಜನವರಿ26ನೇ ಭಾನುವಾರ ಆಚರಿಸುತ್ತಿದೆ. ಈ ಬಾರಿಯ ವಿಶೇಷತೆಗಳೇನು? ಟಿಕೆಟ್ ಬುಕ್ಕಿಂಗ್ ಹೇಗೆ? ಯಾಕೆ ಗಣರಾಜ್ಯೋತ್ಸವವನ್ನು ಜ.26ರಂದೇ ಆಚರಿಸುತ್ತಾರೆ ಎಂಬ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Advertisement
ಜ.26ರಂದೇ ಗಣರಾಜ್ಯೋತ್ಸವ ಆಚರಣೆ ಯಾಕೆ?
1929 ರ ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಸೆಷನ್ ನಲ್ಲಿ ಜವಹಾರ್ ಲಾಲ್ ನೆಹರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 26, 1930 ಕ್ಕೆ ದೇಶ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದನ್ನೇ ಪೂರ್ಣ ಸ್ವರಾಜ್ ದಿವಸ್ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಲಾಗಿತು. ಆದರೆ ಇದು 1947 ವರೆಗೂ ಈಡೇರಲಿಲ್ಲ. ಆದ್ದರಿಂದ ನಿರ್ಣಯದಲ್ಲಿ ಕೈಗೊಂಡಂತೆ ಮೊದಲು ಆಚರಣೆ ಮಾಡಬೇಕೆಂದುಕೊಂಡಿದ್ದ ಸ್ವಾತಂತ್ರ್ಯ ದಿನದ ದಿನಾಂಕವಾದ ಜ.26 ರಂದೇ ಸಂವಿಧಾನವನ್ನು ಜಾರಿಗೊಳಿಸಲಾಯಿತು.
Advertisement
ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತವಾಗಿದೆ. 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಕೂಡ ನಮ್ಮ ದೇಶವು ಸಂವಿಧಾನವನ್ನು ಹೊಂದಿರಲಿಲ್ಲ. 26 ಜನವರಿ 1950 ರಂದು ಸಂವಿಧಾನವನ್ನು ಸ್ಥಾಪನೆ ಮಾಡಿದ ದಿನವಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
Advertisement
Advertisement
ಗಣರಾಜ್ಯೋತ್ಸವ ದಿನದ ಮಹತ್ವ ಹಾಗೂ ಆಚರಣೆ:
1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ದಿನವಾಗಿದೆ. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್ 26ರಂದು ನಡೆದಿತ್ತು. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಭಾರತದ ಬಾವುಟವನ್ನು ಹಾರಿಸಿ ಸಂವಿಧಾನ ಜಾರಿಗೆ ಬಂದ ದಿನವನ್ನು ಘೋಷಿಸಿದ್ದರು.
ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ, ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುತ್ತದೆ. ಭಾರತದ ರಾಷ್ಟ್ರೀಯ ಸೇನೆಯನ್ನು ಒಳಗೊಂಡ ಪರೇಡ್, ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಕಣ್ಮನ ಸೆಳೆಯುತ್ತವೆ. ಈ ದಿನ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ದೇಶದಾದಂತ್ಯ ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಈ ಬಾರಿಯ ವಿಶೇಷತೆಗಳೇನು?
ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿ, ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿ ಈ ಮೆರವಣಿಗೆ ಪ್ರಾರಂಭವಾಗುತ್ತದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಮಿಲಿಟರಿ ನಿಯೋಗಗಳು ಸಿಂಕ್ರೊನೈಸ್ಡ್ ರಚನೆಗಳಲ್ಲಿ ಮೆರವಣಿಗೆ ನಡೆಸುತ್ತವೆ. ಇದರ ನಂತರ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಪ್ರಭಾವಶಾಲಿ ಫ್ಲೈಪಾಸ್ಟ್ ನಡೆಯುತ್ತದೆ. ಈ ಮೆರವಣಿಗೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ರಾಜ್ಯ ಸ್ತಬ್ಧಚಿತ್ರಗಳ ಪ್ರಸ್ತುತಿ. ಈ ಸ್ತಬ್ಧಚಿತ್ರಗಳು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತವೆ.
2025ರ ಗಣರಾಜ್ಯೋತ್ಸವ ಥೀಮ್:
ಈ ವರ್ಷದ ಗಣರಾಜ್ಯೋತ್ಸವ ಆಚರಣೆಯು ‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವಕ್ಕಾಗಿ ಒಂದು ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡುತ್ತದೆ. ಈ ವರ್ಷದ ವಿಷಯವು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಎತ್ತಿ ತೋರಿಸುತ್ತದೆ.
2025 ರ ಗಣರಾಜ್ಯೋತ್ಸವಕ್ಕೆ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ. ಹೆಚ್ಚುವರಿಯಾಗಿ, 11 ಕೇಂದ್ರ ಸರ್ಕಾರಿ ತುಕಡಿಗಳು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಅತಿಥಿ ಯಾರು?
ಜನವರಿ 26, 2025 ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಧ್ಯಕ್ಷ ಸುಬಿಯಾಂಟೊ ಅಕ್ಟೋಬರ್ 2024ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆ ಜನವರಿ 26ರಂದು ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ಇದಲ್ಲದೆ, ಸುಮಾರು 10,000 ರೂ. ವಿಶೇಷ ಅತಿಥಿಗಳನ್ನು ಸಹ ಭವ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.
ಗಣರಾಜ್ಯೋತ್ಸವದ ಮೆರವಣಿಗೆ ಭಾರತದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿದೆ. ಈ ರಸ್ತೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿದೆ.
ಕರ್ನಾಟಕದಿಂದ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ:
ಇತ್ತೀಚೆಗೆ ಪ್ರಾಚ್ಯವಸ್ತು ವಿಶೇಷ ಸಂಗ್ರಹಣೆಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಲಕ್ಕುಂಡಿ ಗ್ರಾಮದ ಬ್ರಹ್ಮ ಜಿನಾಲಯ ಜನವರಿ 26 ರಂದು ದೆಹಲಿ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆ ಆಗಿದೆ. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡಿಸುವ ಪ್ರಕ್ರಿಯೆಗೆ ಮತ್ತು ಪ್ರಾಚ್ಯವಸ್ತು ಸಂರಕ್ಷಣೆಗೆ ಪೂರಕವಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಎಚ್.ಕೆ. ಪಾಟೀಲ್ ಪ್ರವಾಸೋದ್ಯಮ ಇಲಾಖೆ ಸಚಿವರಾದ ನಂತರ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆಯುತ್ತಿದ್ದು, ಜೈನ ದೇವಾಲಯ ದೆಹಲಿಯ ಪರೇಡ್ ಗೆ ಆಯ್ಕೆ ಆಗಿದ್ದು, ಈ ಭಾಗದ ಜನರಲ್ಲಿನ ಸಂತಸ ಇಮ್ಮಡಿಗೊಳಿಸಿದೆ.
ಕಳೆದ ಎರಡು ವರ್ಷದಿಂದ ಕರ್ನಾಟಕದಿಂದ ಯಾವುದೇ ಟ್ಯಾಬ್ಲೋ ಆಯ್ಕೆ ಆಗಿರಲಿಲ್ಲ. ಈ ವರ್ಷ ಲಕ್ಕುಂಡಿ ಬ್ರಹ್ಮ ಜಿನಾಲಯ ಸ್ತಬ್ಧ ಚಿತ್ರಕ್ಕೆ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದೆಹಲಿಯಲ್ಲಿ ಟ್ಯಾಬ್ಲೋ ನಿರ್ಮಾಣ ಕಾರ್ಯ ಆರಂಭವಾಗಿದೆ. ನುರಿತ ಕಲಾವಿದರು ಫೈಬರ್‌ನಿಂದ ಬ್ರಹ್ಮ ಜಿನಾಲಯದ ಸ್ತಬ್ಧ ಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ.
ದೇವಾಲಯದ ವಿಶೇಷತೆ ಏನು?
11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಮೇಲ್ಭಾಗದಲ್ಲಿ ದ್ರಾವಿಡ ಶೈಲಿ ಹೊಂದಿರುವ ಬ್ರಹ್ಮ ಜಿನಾಲಯವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದೆ. ಗರ್ಭಗೃಹ, ಅಂತರಾಳ, ಗೂಢ ಮಂಟಪ, ಅಗಮ ಮಂಟಪದಂತಹ ತಲವಿನ್ಯಾಸದಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕರಣೆಯಿದ್ದು, ಮೇಲ್ಬಾಗದಲ್ಲಿ ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ.
ತೀರ್ಥಂಕರನನ್ನು ಈಗ ನೇಮಿನಾಥ ಎಂದು ಕರೆಯಲಾಗುತ್ತಿದೆ. ಗರ್ಭ ಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು, ಮೂಲೆಗಳಲ್ಲಿ ಅರ್ಧಕಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ. ಅಂತರಾಳಕ್ಕೆ ಹೊಂದಿಕೊಂಡಂತೆ ಗೂಢಮಂಟಪವಿದೆ. ಮಧ್ಯದಲ್ಲಿ ನಾಲ್ಕು ಸ್ವತಂತ್ರ ಶ್ರೀಕಾರ ಸ್ತಂಭಗಳಿದ್ದು, ಪೀಠ, ಓಂ, ಕಾಂಡ ಮಾಲಾಸ್ಥಾನ, ಕುಂಭ, ಕಲಶ, ಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಇಕ್ಕೆಲದಲ್ಲಿ ಚತುಮುರ್ಖ ಬ್ರಹ್ಮ ಮತ್ತು ಪದ್ಮಾವತಿ ಶಿಲ್ಪಗಳಿವೆ. ಮಧ್ಯದಲ್ಲಿ ಪದ್ಮದ ಉಬ್ಬು ಅಲಂಕಾರವಿದೆ. ಸ್ತಂಭಗಳ ಪೀಠ ಭಾಗದಲ್ಲಿ ದರ್ಪಣ ಸುಂದರಿ, ನರ್ತಕಿ, ತಾಯಿ ಮತ್ತು ಮಗು, ಕೊಳಲು ನುಡಿಸುವ ಸ್ತ್ರೀಯ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.
ಬ್ರಹ್ಮ ಜಿನಾಲಯದ ಬಾಹ್ಯ ವಾಸ್ತು:
ಜೈನ ದೇವಾಲಯವು ಕಪೋತಬಂಧ, ಅಧಿಷ್ಠಾನವನ್ನು ಹೊಂದಿದ್ದು, ಅದಕ್ಕೆ ಕ್ರಮವಾಗಿ ಖುರಕ, ಪದ್ಮ, ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ ಮತ್ತು ಮಕರಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀತಿರ್ಮುಖಗಳ ಅಲಂಕಾರವಿದೆ. ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ. ಗರ್ಭಗೃಹದ ಮೇಲಿನ ಶಿಖರವು ಚತುಸ್ಥಲ ದ್ರಾವಿಡ ಮಾದರಿಯದ್ದಾಗಿದೆ. ಮೊದಲನೆಯ ಮಹಡಿಯಲ್ಲಿ ಹಾರವು ಕೂಟ, ಪಂಜರ, ಶಾಲಾಗಳಿಂದ ಕೂಡಿದೆ.
ಕಪೋತದ ಮೇಲೆ ವೇದಿಕೆ ಇದೆ. ಕೂಟ ಮತ್ತು ಪಂಜರಗಳಲ್ಲಿ ಕೀತಿರ್ಮುಖಗಳ ಅಲಂಕಾರವಿದೆ. ಶಾಲಾದಲ್ಲಿ ಜಿನಬಿಂಬಗಳನ್ನು ಮತ್ತು ಶಿವ, ಸೂರ್ಯನ ಶಿಲ್ಪಗಳನ್ನು ಕೆತ್ತಲಾಗಿದೆ. 2 ಮತ್ತು 3ನೇ ಮಹಡಿಗಳಲ್ಲಿಯೂ ಇದೇ ರೀತಿಯ ಹಾರದ ಅಲಂಕಾರವಿದೆ. ಅದರ ಮೇಲೆ ಕಪೋತವಿದೆ. ಮೇಲ್ಬಾಗದಲ್ಲಿ ಕಲಶವಿದೆ. ಶಿಖರದ ಮುಂಭಾಗದಲ್ಲಿಯ ಶುಕನಾಸಿಯು ಗವಾದ ಅಲಂಕಾರದಿಂದ ಕೂಡಿದ್ದು ಮಧ್ಯದಲ್ಲಿ ಶಿಲ್ಪವಿಲ್ಲ. ಅದರ ಮೇಲೆ ಕೀತಿರ್ ಮುಖವಿದೆ. ಲಕ್ಕುಂಡಿ ಗ್ರಾಮದಲ್ಲಿ 16 ಜೈನ ಬಸದಿಗಳು, 5 ವೈಷ್ಣವ ದೇವಾಲಯಗಳು, 1 ಬೌದ್ಧ ಮಂದಿರ, 101 ದೇವಸ್ಥಾನ, 101 ಈಶ್ವರ ಲಿಂಗಗಳು, 101 ಬಾವಿಗಳು ಹಾಗೂ 22 ವೀರಶೈವ ಲಿಂಗಾಯತ ಮಠಗಳಿದ್ದವು ಎಂಬುದಾಗಿ ಶಿಲಾಶಾಸನಗಳಿಂದ ತಿಳಿದು ಬಂದಿದೆ
ಟಿಕೆಟ್ ಬುಕ್ಕಿಂಗ್ ಹೇಗೆ?
ಆಫ್‌ಲೈನ್ ಟಿಕೆಟ್ ಖರೀದಿ:
ಜನವರಿ 2ರಿಂದ ಜನವರಿ 11ರವರೆಗೆ ನವದೆಹಲಿಯಾದ್ಯಂತ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಈಗಾಗಲೇ ಟಿಕೆಟ್ ಖರೀದಿಸುವ ಅವಧಿ ಮುಗಿದುಹೋಗಿದೆ.
ಟಿಕೆಟ್ ಬೆಲೆ:
– ಜನವರಿ 26ರಂದು ಗಣರಾಜ್ಯೋತ್ಸವ ಮೆರವಣಿಗೆಯ ಟಿಕೆಟ್‌ಗಳು 20 ರೂ.ನಿಂದ ಆರಂಭವಾಗಲಿದ್ದು, ಪ್ರೀಮಿಯಂ ಟಿಕೆಟ್‌ಗಳು 100 ರೂ.ಗೆ ಲಭ್ಯವಿದೆ.
– ಬೀಟಿಂಗ್ ರಿಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್ ಜನವರಿ 28ರಂದು ನಡೆಯಲಿದ್ದು, ಟಿಕೆಟ್ ಬೆಲೆ ರೂ. 20ರಿಂದ ಆರಂಭವಾಗಲಿದೆ.
– ಬೀಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದ್ದು, ಟಿಕೆಟ್ ಬೆಲೆ 100 ರೂ. ಇರಲಿದೆ.
ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು, aamantran.mod.gov.in/login ಅಥವಾ rashtraparv.mod.gov.in ಗೆ ಭೇಟಿ ನೀಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.