ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಮಾನ ಹೊರ ಬೀಳುವ ಮುನ್ನವೇ ಅತೃಪ್ತರ ಮೇಲೆ ಕಾಂಗ್ರೆಸ್ ನಾಯಕರು ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯ 164-1ಬಿ ಅಸ್ತ್ರ ಬಳಸಲು ಕಾಂಗ್ರೆಸಿಗರು ಕಾನೂನು ಕೋಶದ ಸಲಹೆ-ಸೂಚನೆ ಪಡೆದು ಭಾರೀ ಸ್ಕೆಚ್ ಹಾಕಿದ್ದಾರೆ. ಬಿಜೆಪಿ ಸೇರಿದರೂ ಸಚಿವ ಸ್ಥಾನ ಸಿಗಬಾರದು ಅಂತ ನೆರೆಯ ತಮಿಳುನಾಡಿನಲ್ಲಿ ಶಾಸಕರ ಅನರ್ಹತೆ ಉಲ್ಲೇಖಿಸಿ ಸ್ಪೀಕರ್ ಗೆ ದೂರು ಕೊಡುವುದಕ್ಕೆ ಸಜ್ಜಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‍ಪಿ) ಸಭೆ ಮಂಗಳವಾರ ನಡೆಯಲಿದೆ. ಒಂದು ವೇಳೆ ಸಭೆಗೆ ಅತೃಪ್ತ ಶಾಸಕರು ಹಾಜರಾಗದಿದ್ದರೆ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ 164-1ಬಿ ಅಸ್ತ್ರ ಬಳಸಲು ಪ್ಲಾನ್ ರೂಪಿಸಲಾಗಿದೆ. ಬಂಡಾಯ ಶಾಸಕರಿಗೆ ಮೊದಲ ಹಂತದಲ್ಲಿ ಬಿಸಿ ಮುಟ್ಟಿಸಲು ಸೋಮವಾರ ಕೂಡ ದೂರು ನೀಡಲಾಗಿದೆ. ಆದರೆ ನಾಳೆ ಪರಿಸ್ಥಿತಿಯನ್ನು ಅರಿತು, ಶಾಸಕರು ಸಭೆಗೆ ಬರದೇ ಇದ್ದರೆ ಖುದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ಕೇಳಿ ಬಂದಿದೆ.
Advertisement
Advertisement
ಏನಿದು ಪ್ರಜಾಪ್ರತಿನಿಧಿ ಕಾಯ್ದೆಯ 164-1ಬಿ?:
ಪ್ರಜಾಪ್ರತಿನಿಧಿ ಕಾಯ್ದೆಯ 10ನೇ ಶೆಡ್ಯೂಲ್‍ನ ಪ್ಯಾರಾಗ್ರಾಫ್ 2ರ ಪ್ರಕಾರ ಅನರ್ಹತೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಕಾಯ್ದೆ ಪ್ರಕಾರ ಅನರ್ಹಗೊಳಿಸಿದರೆ ಅತೃಪ್ತರು ಬಿಜೆಪಿಗೆ ಹೋದರೂ ಸಚಿವ ಸ್ಥಾನ ಸಿಗುವುದಿಲ್ಲ. ಈ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾದರೆ ನ್ಯಾಯಾಲಯದಲ್ಲಿ ತೀರ್ಪು ಬರಬೇಕು. ಇಲ್ಲವೇ ರಾಜೀನಾಮೆ ಕೊಟ್ಟು ಮರು ಆಯ್ಕೆಯಾಗಬೇಕು. ಗುಂಪು ಗುಂಪಾಗಿ ರಾಜೀನಾಮೆ, ವಿಮಾನ ಪಯಣ, ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಇದೆಲ್ಲವೂ ಬಿಜೆಪಿ ಜೊತೆ ಕೈ ಜೋಡಿಸಿರೋದಕ್ಕೆ ಸಾಕ್ಷಿ ಎಂದು ಆರೋಪಿಸಿ ಸ್ಪೀಕರ್‌ಗೆ ದೂರು ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.
ಸ್ಪೀಕರ್‌ಗೆ ದೂರು ಕೊಡುವಾಗಲೂ ಅತೃಪ್ತರಲ್ಲಿ ಬಿರುಕು ಮೂಡಿಸುವಂತೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ಸಿ. ಪಾಟೀಲ್ ಮೇಲೆ ಶೆಡ್ಯೂಲ್ 10ರ ಅನ್ವಯ ದೂರು ನೀಡಿದರೆ ಬೆಂಗಳೂರು ಶಾಸಕರ ಮೇಲೆ ಸಾಮಾನ್ಯ ದೂರು ಕೊಟ್ಟು, ಅತೃಪ್ತರಲ್ಲಿ ಬಿರುಕು ಮೂಡಿಸಲೂ ಪ್ಲಾನ್ ಮಾಡಲು ಮುಂದಾಗಿದ್ದಾರೆ. ದೂರು ದಾಖಲಾದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವುದು ಅನುಮಾನ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.