ಮಂಡ್ಯ: ಶನಿವಾರ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಗದ್ದೆ ನಾಟಿ ಮಾಡಲು ಬರುತ್ತಿರುವ ಬೆನ್ನಲ್ಲೇ ಅವರ ಆಗಮನಕ್ಕಾಗಿ ರಸ್ತೆಗಳು ಸಜ್ಜಾಗುತ್ತಿದ್ದು, ಗುಂಡಿ ಬಿದ್ದ ರಸ್ತೆಗಳು ಹಾಗೂ ಡಾಂಬರು ಕಾಣದ ರಸ್ತೆಗಳಿಗೆ ಡಾಂಬರು ಭಾಗ್ಯ ಸಿಕ್ಕಿದೆ.
ಕುಮಾರಸ್ವಾಮಿಯವರು ಪಾಂಡವಪುರ ತಾಲೂಕಿನ ಸೀತಾಪುರ ಹಾಗೂ ಅರಳಕುಪ್ಪೆ ಗ್ರಾಮದ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗದ್ದೆಗೆ ಹೋಗುವ ರಸ್ತೆಗಳನ್ನ ತರಾತುರಿಯಲ್ಲಿ ರಿಪೇರಿ ಕಾರ್ಯ ನಡೆಸುತ್ತಿದ್ದಾರೆ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಬರ್ತಾರೆ ಅಂತ ರಸ್ತೆ ಮಾಡ್ತಿದ್ದೀರಲ್ಲ, ರಸ್ತೆ ಬಾಳಿಕೆ ಬರುತ್ತಾ ಎಂದು ರಸ್ತೆ ಮಾಡುತ್ತಿರುವವರಿಗೆ ಅರಳಕುಪ್ಪೆ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಪ್ರತಿ ನಿತ್ಯ ಕಬ್ಬಿನ ಗಾಡಿ, ಲಾರಿ ಓಡಾಡುತ್ತವೆ ಹೀಗಿದ್ದಾಗ ತರಾತುರಿ ಕೆಲಸದಿಂದ ರಸ್ತೆ ನಿರ್ಮಿಸಿದರೆ ಕಿತ್ತು ಬರಲ್ವೆ ಎಂದು 80 ವರ್ಷದ ಜವರೇಗೌಡ ಎಂಬವರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮಾಗಾರಿ ನಡೆಸುತ್ತಿರುವವರು ರಸ್ತೆಯನ್ನು ಉತ್ತಮವಾಗಿ ನಿರ್ಮಿಸುತ್ತಿದ್ದೇವೆ. ಯಾವುದೇ ರೀತಿ ಡಾಂಬರು ಕಿತ್ತು ಬರಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಸಿಡಿಎಸ್ ನಾಲೆ ಪಕ್ಕದಲ್ಲೇ ಇರುವ ವಿಶಾಲವಾದ ಗದ್ದೆ ಬಯಲಿನಲ್ಲಿ ಸುಮಾರು 5 ಎಕರೆಯಷ್ಟು ಜಾಗವನ್ನು ಮುಖ್ಯಮಂತ್ರಿಗಳ ನಾಟಿ ಕೆಲಸಕ್ಕೆಂದು ತಯಾರಿ ಮಾಡಲಾಗಿದೆ. ರೈತರಾದ ಮಹದೇವಮ್ಮ, ದೇವರಾಜು, ಮಹೇಶ, ಹೇಮಲತ, ಮಾಯಮ್ಮ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಜೊತೆ ರೈತರೂ ಕೂಡ ನಾಟಿ ಕೆಲಸಕ್ಕೆ ಸಾಥ್ ನೀಡಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ 100 ಮಹಿಳೆಯರು ಮತ್ತು 50 ರೈತ ಪುರುಷರು ಸಾಥ್ ಕೊಡಲಿದ್ದಾರೆ. ಜೊತೆಗೆ 25 ಜೋಡಿ ಎತ್ತುಗಳು ಮೂಲಕ ನಾಟಿ ಕೆಲಸ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews