ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ 131 ದಿನಗಳ ಬಳಿಕ ಸೆರೆವಾಸದಿಂದ ಮುಕ್ತಿ ಪಡೆದಿರುವ ನಟ ದರ್ಶನ್ಗೆ ಇಂದು ಬಿಗ್ ಡೇ ಆಗಿದೆ. ನಟ ದರ್ಶನ್ (Darshan), ಪವಿತ್ರಾ ಗೌಡ ಸೇರಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸಲಿದೆ.
ನ್ಯಾ. ಜೆ.ಬಿ ಪಾರ್ದ್ರಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು ವಿಸ್ತೃತ ವಾದ ಆಲಿಸುವ ಸಾಧ್ಯತೆ ಇದೆ. ಕಳೆದ ವಿಚಾರಣೆಯಲ್ಲಿ ಪ್ರಕರಣದ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನು ಕೋರ್ಟ್ ಆಲಿಸಿತ್ತು. ಪ್ರಕರಣದಲ್ಲಿ ದರ್ಶನ ಪಾತ್ರ ಏನು? ಪವಿತ್ರಾಗೌಡ ಯಾರು ಈಕೊಲೆಗೆ ಹೇಗೆ ಸಂಬಂಧ ಹಾಗೂ ದರ್ಶನ ಅಭಿಮಾನಿಗಳು ಬೆಂಬಲಿಗರನ್ನು ಹೇಗೆ ಹತ್ಯೆ ಮಾಡಿದರು ಎಂಬುದವರ ಬಗ್ಗೆ ಪೊಲೀಸರ ಪರ ವಕೀಲರಿಂದ ವಾದ ಕೇಳಿತ್ತು.
ಅಲ್ಲದೇ ಬೆಂಗಳೂರು ಪೊಲೀಸರ ಮುಂದೆ ಕೋರ್ಟ್ ಎರಡು ಪ್ರಶ್ನೆ ಇಟ್ಟಿತ್ತು. ಕೊಲೆಯಲ್ಲಿ ದರ್ಶನ್ ನೇರ ಹಸ್ತಕ್ಷೇಪ ಅದಕ್ಕೆ ಪೂರಕವಾದ ಸಾಕ್ಷ್ಯಗಳ ಬಗ್ಗೆ ಮಾಹಿತಿ ಕೇಳಿತ್ತು. ಇಂದು ಈ ವಾದ ಮುಂದುವರಿಯಲಿದ್ದು ದರ್ಶನ್ ಪಾತ್ರದ ಬಗ್ಗೆ ಕೋರ್ಟ್‌ಗೆ ಇನ್ನಷ್ಟು ಮಾಹಿತಿಯನ್ನು ವಕೀಲರ ಮೂಲಕ ಪೊಲೀಸರು ನೀಡಲಿದ್ದಾರೆ.
ಇದಾದ ಬಳಿಕ ದರ್ಶನ ಪರ ವಕೀಲರು ವಾದ ಮಂಡಿಸಲಿದ್ದು ಬಳಿಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡಬೇಕೆ, ಬೇಡ್ವೆ ಎನ್ನುವ ಬಗ್ಗೆ ತಿರ್ಮಾನಿಸಲಿದೆ. ಸದ್ಯ ಹೈಕೋರ್ಟ್ ನಿಂದ ಜಾಮೀನು ಪಡೆದು ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ದರ್ಶನ ವಿದೇಶಕ್ಕೂ ತೆರಳಿದ್ದಾರೆ. ಈ ನಡುವೆ ನಡೆಯುತ್ತಿರುವ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.