– ದರ್ಶನ್ ಸೇರಿ ನಾಲ್ವರು ಮತ್ತೆ 2 ದಿನ ಪೊಲೀಸ್ ಕಸ್ಟಡಿಗೆ
– ಪರಪ್ಪನ ಅಗ್ರಹಾರ ಸೇರಿದ ಪವಿತ್ರಾ ಗೌಡ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka Swamy Murder Case) ಅರೆಸ್ಟ್ ಆಗಿದ್ದ ಆರೋಪಿಗಳ ಪೈಕಿ ನಟ ದರ್ಶನ್ (Darshan) ಸೇರಿ ನಾಲ್ವರನ್ನು ಮತ್ತೆ ಎರಡು ದಿನ ಪೊಲೀಸರು ಕಸ್ಟಡಿಗೆ (Police Custody) ಪಡೆದಿದ್ದಾರೆ. ನಟಿ ಪವಿತ್ರಾಗೌಡ, ಪವನ್ ಸೇರಿ 9 ಮಂದಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ನಟಿ ಪವಿತ್ರಗೌಡ (Pavithra Gowda) ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
Advertisement
ಇಂದು ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ ಗ್ಯಾಂಗ್ ಸದಸ್ಯರನ್ನು ಪೊಲೀಸರು ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದರು. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂಬ ಕಾರಣ ನೀಡಿ ನಟ ದರ್ಶನ್, ವಿನಯ್, ಪ್ರದೂಷ್ ಮತ್ತು ಧನರಾಜ್‌ನನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆದರು.
Advertisement
ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಪೊಲೀಸರು ಹೊಸ ರಿಮ್ಯಾಂಡ್ ಕಾಪಿ (Remand Copy) ಸಲ್ಲಿಸಿದ್ದು ಅದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಸ್ಫೋಟಕ ಮಾಹಿತಿಗಳಿವೆ. ಇದನ್ನೂ ಓದಿ: NEET, NET Exam Row: ಉನ್ನತ ಮಟ್ಟದ ಸಮಿತಿ ರಚನೆ, ಯಾರನ್ನೂ ಬಿಡಲ್ಲ: ಧರ್ಮೇಂದ್ರ ಪ್ರಧಾನ್
Advertisement
Advertisement
ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
ದರ್ಶನ್, ಪಬ್ ಓನರ್ ವಿನಯ್, ಸಿನಿ ನಟ ಪ್ರದೂಷ್ ಮತ್ತು ದರ್ಶನ್ ಆಪ್ತ ಧನರಾಜ್ ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಮರೆ ಮಾಚುತ್ತಾ ಬಂದಿದ್ದು ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುತ್ತದೆ.
ಜೂನ್ 19 ರಂದು ದರ್ಶನ್ ಮನೆಯಿಂದ 37.40 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣದ ಮೂಲದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕಿದೆ. ಅಷ್ಟೇ ಅಲ್ಲದೇ ಆರೋಪಿಯು ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿದ್ದು ಅದರ ಉದ್ದೇಶ ಮತ್ತು ಕಾರಣವನ್ನು ಆರೋಪಿಯ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಬೇಕಿದೆ.
ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೂಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಈತನೂ ಸಹ ತನಿಖೆಗೆ ಸರಿಯಾಗಿ ಸ್ಪಂದಿಸದೇ ವಿಚಾರಗಳನ್ನು ಮರೆ ಮಾಚುತ್ತಿದ್ದಾನೆ. ಈತ ಮತ್ತೊಬ್ಬ ವ್ಯಕ್ತಿಯನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆತನ ಬಗ್ಗೆ ಮಾಹಿತಿಯನ್ನು ಸರಿಯಾಗಿ ತಿಳಿಸದ ಕಾರಣ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಇದನ್ನೂ ಓದಿ: ಜೈಲುಪಾಲಾದ ಅಮ್ಮನ ಕಂಡು ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ ಮಗಳು
ಧನರಾಜ್ ಎಲೆಕ್ಟ್ರಿಕ್ ಶಾಕ್ ನೀಡಲು ಖರೀದಿಸಿದ ಸಾಮಾಗ್ರಿಗಳನ್ನು ಎಲ್ಲಿ ಖರೀದಿ ಮಾಡಿದ್ದಾನೆ ಎಂಬ ವಿಚಾರವನ್ನು ಸರಿಯಾಗಿ ತಿಳಿಸದೇ ವಿಚಾರಗಳನ್ನು ಮರೆ ಮಾಚುತ್ತಿದ್ದಾನೆ. ಅಷ್ಟೇ ಅಲ್ಲದೇ ಈತ ಕೃತ್ಯ ನಡೆದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜೊತೆಯಲ್ಲಿ ಬಂದು ಹೋಗಿದ್ದಾನೆ. ಈತನ ಮೊಬೈಲ್ ಫೋನಿನಲ್ಲಿ ಅತೀ ಮುಖ್ಯವಾದ ಸಾಕ್ಷ್ಯಾಧಾರ ದೊರೆತಿದೆ. ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂಬ ಬಗ್ಗೆ ವಿನಯ್ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಾಗಿರುತ್ತದೆ.
ಕೃತ್ಯ ನಡೆದ ಸ್ಥಳದ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹಲವಾರು ವ್ಯಕ್ತಿಗಳು ಸಾಕ್ಷ್ಯ ನುಡಿಯದಂತೆ ಹಣದ ಆಮಿಷ ನೀಡುತ್ತಿರುವುದು ತಿಳಿದು ಬಂದಿದೆ. ಈ ವ್ಯಕ್ತಿಗಳು ಆರೋಪಿಗಳೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ.