ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್ (Darshan), ಪವಿತ್ರಾಗೌಡ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ (High Court) ಜಾಮೀನು ಮಂಜೂರು ಮಾಡಿದೆ.
ಸುದೀರ್ಘ ವಾದ ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ಇಂದು ಆದೇಶ ಪ್ರಕಟಿಸಿ ಜಾಮೀನು ಮಂಜೂರು ಮಾಡಿತು. ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಆರೋಪಿಗಳು ಬೆಂಗಳೂರು (Bengaluru) ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಿತು.
ಕಳೆದ ಆರು ವಾರಗಳಿಂದ ನಟ ದರ್ಶನ್ ಮೆಡಿಕಲ್ ಬೇಲ್ ಮೇಲೆ ಹೊರಗಿದ್ದಾರೆ. ಹೀಗಾಗಿ ನಟಿ ಪವಿತ್ರಾಗೌಡ ಸೇರಿ ಉಳಿದ ಆರು ಮಂದಿ ಬಿಡುಗಡೆಗೆ ಪ್ರಕ್ರಿಯೆಗಳು ಶುರುವಾಗಿವೆ. ಸೋಮವಾರ ಇವರು ಜೈಲಿಂದ ಬಿಡುಗಡೆಯಾಗುವ ಸಂಭವ ಇದೆ. ಪವಿತ್ರಾ ಗೌಡಗೆ (Pavithra Gowda) ಬೇಲ್ ಸಿಗುತ್ತಲೇ ನ್ಯಾಯಾಲಯದಲ್ಲಿ ಹಾಜರಿದ್ದ ಅವರ ತಾಯಿ ಆನಂದಭಾಷ್ಪ ಸುರಿಸಿದರು.
ನಟ ದರ್ಶನ್ ಸರ್ಜರಿ ಮಾಡಿಸಿಕೊಳ್ತಾರಾ? ಮಾಡಿಸಿಕೊಳ್ಳಲ್ವಾ ಎನ್ನುವ ಕುತೂಹಲ ಮುಂದುವರೆದಿದೆ. ಅಂದ ಹಾಗೇ, ಪ್ರಕರಣದ ಒಟ್ಟು 17 ಅರೋಪಿಗಳ ಪೈಕಿ ಈ ಮೊದಲೇ ಐವರಿಗೆ ಜಾಮೀನು ಸಿಕ್ಕಿತ್ತು. ಈಗ ಏಳು ಮಂದಿಗೆ ಬೇಲ್ ಸಿಕ್ಕಿದೆ. ಉಳಿದ ಐವರು ಆರೋಪಿಗಳಿಗೆ ಮಾತ್ರ ಜಾಮೀನು ಸಿಕ್ಕಿಲ್ಲ. ಈ ಮಧ್ಯೆ ದರ್ಶನ್ ಸೇರಿ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ ಇದನ್ನೂ ಓದಿ: ದರ್ಶನ್‌ಗೆ ಬೇಲ್ ಸಿಕ್ಕಿರೋದು ತುಂಬಾ ಖುಷಿಯಿದೆ: ನಿರ್ದೇಶಕ ತರುಣ್ ಸುಧೀರ್
ಇಂದು ಯಾರಿಗೆಲ್ಲಾ ಬೇಲ್?
* ನಟ ದರ್ಶನ್ – ಎ2 – ಈಗಾಗಲೇ ಹೊರಗಿದ್ದಾರೆ
* ಪವಿತ್ರಾಗೌಡ – ಎ1 – ಬೆಂಗಳೂರು ಜೈಲು
* ನಾಗರಾಜ್ – ಎ11 – ಕಲಬುರಗಿ ಜೈಲು
* ಲಕ್ಷ್ಮಣ್ – ಎ12 – ಶಿವಮೊಗ್ಗ ಜೈಲು
* ಅನು ಕುಮಾರ್ – ಎ7 – ಬೆಂಗಳೂರು ಜೈಲು
* ಜಗದೀಶ್ – ಎ6 – ಶಿವಮೊಗ್ಗ ಜೈಲು
* ಪ್ರದೋಷ್ ರಾವ್ – ಎ 14 – ಬೆಂಗಳೂರು ಜೈಲು
ಜಾಮೀನು ಸಿಕ್ಕಿದ್ದು ಹೇಗೆ?
ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್ ಜಾಮೀನು ಮಂಜೂರು ಮಾಡಿತು.