ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ಗೆ (Darshan) ಮನೆಯ ಬ್ಲಾಂಕೆಟ್ (Blanket) ಸಿಗುವುದು ಅನುಮಾನ.
ಸಿಕ್ಕಾಪಟ್ಟೆ ಚಳಿ ಆಗುತ್ತಿದ್ದು ಮನೆಯಿಂದ ನೀಡಿರುವ ಬ್ಲಾಂಕೆಟ್ ಕೊಡಿ ಎಂದು ಕೋರ್ಟ್ ಮೂಲಕ ದರ್ಶನ್ ಅನುಮತಿ ಪಡೆದುಕೊಂಡಿದ್ದರು. ಆದರೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ (Alok Kumar) ತಮ್ಮ ಅಧಿಕಾರ ಬಳಸಿಕೊಂಡು ಜೈಲಿನ ನಿಯಮಗಳ ಪ್ರಕಾರವೇ ಎಲ್ಲರಿಗೂ ಒಂದೇ ಮಾದರಿಯ ಬ್ಲಾಂಕೆಟ್ ನೀಡಲು ಮುಂದಾಗಿದ್ದಾರೆ.
ಚಳಿಗಾಲ, ಮಳೆಗಾಲ ಇವೆಲ್ಲವಕ್ಕೂ ಹೊಂದಾಣಿಕೆ ಆಗುವಂತಹ ಬ್ಲಾಂಕೆಟ್ ವಿತರಣೆಗೆ ಆದೇಶ ಹೊರಡಿಸಲು ತಯಾರಿ ನಡೆಸಲಾಗಿದೆ. ಈ ಆದೇಶ ಹೊರಡಿಸಿದರೆ ದರ್ಶನ್ ಬ್ಲಾಂಕೆಟ್‌ಗೆ ಕುತ್ತು ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಮದುವೆಗೆ ಒಪ್ಪದ ಯುವತಿ – ಪುರೋಹಿತ ಆತ್ಮಹತ್ಯೆ
ಜೈಲು ಸೇರಿರುವ ಪವಿತ್ರಗೌಡಗೆ (Pavithra Gowda) ಮನೆ ಊಟಕ್ಕೆ ಅನುಮತಿ ನೀಡದೇ ಇರಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಜೈಲಿನಲ್ಲಿ (Jail) ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡದೇ ಇರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.
ಯಾಕೆ ಈ ನಿರ್ಧಾರ?
ಮನೆ ಊಟ ಬಂದರೆ ಪರಿಶೀಲನೆ ಮಾಡಿದ ಬಳಿಕ ಜೈಲಿನ ಒಳಗೆ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ತಂಡ ಬೇಕಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಇರುವ 3 ಸಾವಿರ ಆರೋಪಿಗಳು ಇದೇ ಆದೇಶದ ಮೇಲೆ ಅರ್ಜಿ ಹಾಕಿದ್ದರೆ ಕಷ್ಟ ಆಗುತ್ತದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕಾರಾಗೃಹ ಇಲಾಖೆ ನಿರ್ಧಾರ ಮಾಡಿದೆ.
ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟ ಬೇಕೆಂದು ಆರೋಪಿ ಪವಿತ್ರ ಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು.

