ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಕಾಸು ನೀಡುವ ಭರವಸೆ ನೀಡಿದ್ದರು. ಈ ಸಂಬಂಧ ಆದಾಯ ತೆರಿಗೆ (Income Tax) ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ (Ballari Jail) ಇಂದು ದರ್ಶನ್‌ರನ್ನು 7 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದರು.
ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್‌ಗೆ ಕೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು
ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು.
ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್‌ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್‌ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಇಂದು ಸಂಜೆ ನಟ ದರ್ಶನ್‌ರನ್ನು ಡೆವಿಲ್ ಸಿನಿಮಾ ನಿರ್ಮಾಪಕ ಜೆವಿ ಪ್ರಕಾಶ್, ಆಪ್ತರಾದ ಸುನೀಲ್, ಶ್ರೀನಿವಾಸ್ ಭೇಟಿ ಮಾಡಿ ಚರ್ಚೆ ನಡೆಸಿದರು.