– ಪ್ರೂವ್ ಆಗೋವರೆಗೂ ತಮ್ಮನನ್ನ ಬಿಟ್ಟುಕೊಡಲ್ಲ ಎಂದ ಸಹೋದರಿ
ಮಂಡ್ಯ: ನನ್ನ ಮಗ ಕೊಲೆ ಮಾಡುವ ಕೆಲಸಕ್ಕೆ ಹೋಗಲ್ಲ, ನನ್ನ ಮಗನನ್ನು ಯಾರೋ ಸಿಲುಕಿಸಿದ್ದಾರೆ ಎಂದು ರೇಣುಕಾಸ್ವಾಮಿ (Renukaswamy Murder Case) ಕೊಲೆ ಪ್ರಕರಣದ ಆರೋಪಿ ನಂದೀಶ್ ಪೋಷಕರು ಕಣ್ಣೀರು ಹಾಕಿದ್ದಾರೆ.
ಮಂಡ್ಯದ ಚಾಮಲಪುರ ಗ್ರಾಮ ಮೂಲದ ನಂದೀಶ್ ಬಂಧಿತ ಆರೋಪಿಯಾಗಿದ್ದು, ಈತ ದರ್ಶನ್ (Darshan) ಜೊತೆಗೆ ಬೌನ್ಸರ್ ಆಗಿ ಕೆಲಸ ಮಾಡುತ್ತಾ ಇದ್ದ. ಇದೀಗ ಮಗನ ಬಂಧನ ವಿಚಾರ ತಿಳಿದು ನಂದೀಶ್ ಪೋಷಕರು ಕಣ್ಣೀರು ಹಾಕುತ್ತಾ ಇದ್ದಾರೆ.
ನಂದೀಶ್ ತಾಯಿ ಭಾಗ್ಯಮ್ಮ ಮಾತನಾಡಿ, ನನ್ನ ಮಗನ ಜೊತೆ ಭಾನುವಾರ ಸಂಜೆ ಮಾತನಾಡಿದ್ದು, ಬಿಟ್ಟರೆ ಆನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿ ಸಂಬಂಧಿಕರು ಈ ಬಗ್ಗೆ ತಿಳಿಸಿದ್ದಾರೆ. ನಂದೀಶ್ ಎಂಬವರು ಮಂಡ್ಯದಲ್ಲಿ ತುಂಬಾ ಜನ ಇದ್ದಾರೆ, ನನ್ನ ಮಗ ಅಲ್ಲ ಎಂದುಕೊಂಡಿದ್ದೆನು. ನಾವು ಕೂಲಿ ಮಾಡಿ ಬದುಕುವವರು, ಕೇಬಲ್ ಕೆಲಸ ಮಾಡುತ್ತಾ ಬೆಂಗಳೂರಲ್ಲಿ ನಂದೀಶ್ ಇದ್ದನು. ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ನನಗೇನು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ದರ್ಶನ್ ಫ್ಯಾನ್ಸ್ ದಂಡು; ಪೊಲೀಸರಿಂದ ಲಾಠಿ ಚಾರ್ಜ್
ಇನ್ನೂ ನಂದೀಶ್ ಬಂಧನ ನನಗೆ ಶಾಕಿಂಗ್ ಆಗಿದೆ. ನಮ್ಮ ಮನೆಗೆ ನಂದೀಶ್ ಆಧಾರವಾಗಿದ್ದನು. ನಂದೀಶ್ ಕೆಟ್ಟವನಲ್ಲ, ಅವನನ್ನ ಸಿಲುಕಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಯಾವುದೇ ಮಾಹಿತಿ ನಮಗಿಲ್ಲ, ನನ್ನ ಮಗ ಕೊಲೆ ಮಾಡಿಲ್ಲ. ನಮಗೆ ತಿನ್ನಕ್ಕೂ ಇಲ್ಲ, ಮಗ ಇಂತಹ ಕೆಲಸ ಮಾಡಿದ್ದಾನೆ ಅಂದ್ರೆ ನಂಬಲು ಆಗ್ತಿಲ್ಲ ಎಂದು ನಂದೀಶ್ ತಾಯಿ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿರುವ ನಂದೀಶ್ ಅಕ್ಕ ನಂದಿನಿ, ದರ್ಶನ್ ಮೇಲೆ ಅಭಿಮಾನ ಇತ್ತು, ಆದರೆ ಪರಿಚಯ ಇದ್ದ ಬಗ್ಗೆ ನಮಗೆ ಗೊತ್ತಿಲ್ಲ. ದರ್ಶನ್ ಜೊತೆ ಇದ್ದ ತಕ್ಷಣ ಅವರೇ ಕೊಲೆ ಮಾಡಿದ್ದಾರೆ ಎನ್ನಲು ಆಗಲ್ಲ. ಕೊಲೆ ಮಾಡಿದ್ದಾನೆ ಅಂತ ಪ್ರೂವ್ ಆದ್ಮೇಲೆ ಯೋಚನೆ ಮಾಡ್ತೀನಿ. ಅಲ್ಲಿವರೆಗೂ ನನ್ನ ತಮ್ಮನನ್ನು ಬಿಟ್ಟುಕೊಡಲ್ಲ. ಸತ್ತವನ ಫ್ಯಾಮಿಲಿ ಹೇಗೆ ಬೀದಿಗೆ ಬಂದಿದ್ಯೋ ಹಾಗೇ ನಮ್ಮ ಫ್ಯಾಮಿಲಿನೂ ಬೀದಿಗೆ ಬಂದಿದೆ. ನಾವು ಯಾರ ಬಳಿ ಹೇಳಿಕೊಳ್ಳೊಣ ಅವರಿಗೂ ನೋವಾಗಿದೆ ನಮಗೂ ನೋವಾಗಿದೆ ಅಷ್ಟೇ. ಅಭಿಮಾನ ಸಿನೆಮಾಕ್ಕಷ್ಟೇ ಸೀಮಿತವಾಗಿದ್ರೆ ಹೀಗೆ ಆಗ್ತಿರಲಿಲ್ಲ. ಆದರೆ ಅವನೇ ಕೊಲೆ ಮಾಡಿದ್ದಾನೆ ಅಂತ ಹೇಳಲು ಆಗಲ್ಲ ಎಂದು ಹೇಳಿದ್ದಾರೆ.