– ಫಾರೆನ್ಸಿಕ್ ಪರೀಕ್ಷೆಯಲ್ಲಿ ಬಯಲು
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ತಂಡದ ಕ್ರೌರ್ಯಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ (Renukaswamy) ನರಳಿ ನರಳಿ ಪ್ರಾಣ ಬಿಟ್ಟಿರುವುದಾಗಿ ಫಾರೆನ್ಸಿಕ್ ಪರೀಕ್ಷೆಯಲ್ಲಿ ಬಯಲಾಗಿದೆ.
ಭಾನುವಾರ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಂದು ಮೃತನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದರ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವರದಿಯಲಿ ಏನಿದೆ..?: ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಗಾಯಗಳಿರುವುದು ಬಯಲಾಗಿದೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯಾಗಳಾಗಿವೆ. ರಾಡ್ ಮತ್ತು ಕಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪರಿಣಾಮ ರೇಣುಕಾಸ್ವಾಮಿ ನರಳಿ ನರಳಿ ಸತ್ತಿರುವುದಾಗಿ ಫಾರೆನ್ಸಿಕ್ ವೈದ್ಯರು ಪಬ್ಲಿಕ್ ಟಿವಿಗೆ ಮಾಹಿತಿ ಕೊಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಅಂಬುಲೆನ್ಸ್ ಮೂಲಕ ಚಿತ್ರದುರ್ಗಕ್ಕೆ ರವಾನಿಸಲಾಗುತ್ತದೆ.
ಕಿಡ್ನಾಪ್ ಮಾಡಿದ್ದು ಹೇಗೆ?: ಪವಿತ್ರಾ ಗೌಡಗೆ (Pavithra Gowda) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆಯನ್ನು ದರ್ಶನ್ ತಂಡ ತೆರೆದಿತ್ತು. ಈ ಖಾತೆಯ ಮೂಲಕ ರೇಣುಕಾಸ್ವಾಮಿಯ ಜೊತೆ ಸಂವಹನ ಮಾಡಲಾಗುತ್ತಿತ್ತು.
ಶನಿವಾರ ಮಾತನಾಡಲು ಇದೆ ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್ ಕಳುಹಿಸಲಾಗಿತ್ತು. ಈ ಮಸೇಜ್‌ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಅಧ್ಯಕ್ಷ ರಘು ದರ್ಶನ್ ನೇತೃತ್ವದಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತರಲಾಗಿತ್ತು.
ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು. ದರ್ಶನ್ ಹೊಡೆದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಮೈಸೂರಿನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿ ಕರೆ ತಂದಿದ್ದಾರೆ. ಇದನ್ನೂ ಓದಿ: ಏನಿದು ಹತ್ಯೆ ಪ್ರಕರಣ? ದರ್ಶನ್ ಅರೆಸ್ಟ್ ಆಗಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ