ರೇಣುಕಾಸ್ವಾಮಿ ಹತ್ಯೆ‌ಗೂ ಮುನ್ನ ಏನಾಯ್ತು? ಇಂಚಿಂಚು ಮಾಹಿತಿ ಬಾಯ್ಬಿಟ್ಟ ಆರೋಪಿಗಳು; ಡಿ-ಗ್ಯಾಂಗ್‌ ಕ್ರೌರ್ಯ ಅನಾವರಣ!

Public TV
3 Min Read
Darshan 7

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ವಿಚಾರವಾಗಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ರೇಣುಕಾಸ್ವಾಮಿ ಕೊಲೆಯಾಗಿದ್ದು ಎಷ್ಟೊತ್ತಿಗೆ? ಹೇಗೆಲ್ಲಾ ಹಲ್ಲೆ ಮಾಡಿ ಕೊಂದಿದ್ದಾರೆ? ಯಾರು ಇದಕ್ಕೆ ಸಾಥ್‌ ನೀಡಿದ್ದರು ಎಂಬ ಇಂಚಿಂಚು ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಡಿ-ಗ್ಯಾಂಗ್ (D Gang) ಕ್ರೌರ್ಯವನ್ನು ಅನಾವರಣ ಮಾಡಿವೆ.

Darshan 2 1

ಸದ್ಯ ಕಸ್ಟಡಿ ಅವಧಿ ಮುಗಿಯಲು ಇನ್ನೆರಡು ದಿನವಷ್ಟೇ ಬಾಕಿ ಉಳಿದ ಕಾರಣ, ಇನ್ನಷ್ಟು ವಿವರ ಬಾಯ್ಬಿಡಿಸಲು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ. ದರ್ಶನ್‌ ಸೇರಿ ಎಲ್ಲಾ ಆರೋಪಿಗಳ ಮೊಬೈಲ್‌ ರಿಟ್ರೈವ್‌ಗೆ ಕಳಿಸಿದ್ದಾರೆ. ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿ, ಸುಪಾರಿ ನೀಡಲು ಇಟ್ಟಿದ್ದರು ಎನ್ನಲಾದ 30 ಲಕ್ಷ ರೂ. ಹಣವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. 10ನೇ ಆರೋಪಿ ವಿನಯ್ ಮಾಲೀಕತ್ವದ ಪಬ್ ಮೇಲೆ ರೇಡ್ ಮಾಡಿ, ಸಿಸಿಟಿವಿಯ ಕೆಲ ದೃಶ್ಯಾವಳಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿ-ಗ್ಯಾಂಗ್‌ನ ಪವನ್,ನಾಗ ಹೇಳಿದ್ದೇನು?
ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಜಜ್ಜಿದ ರೀತಿಗೆ ಸಂಜೆಯೇ ಸತ್ತು ಹೋಗಿದ್ದ. ಜೂ.8ರಂದು ಸಂಜೆ 6ರಿಂದ 6:30ರ ಒಳಗೆ ಪ್ರಾಣ ಹೋಗಿತ್ತು. ಹಲ್ಲೆಯ ತೀವ್ರತೆಗೆ 6 ಗಂಟೆಗೆಲ್ಲಾ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದ. ರೇಣುಕಾಸ್ವಾಮಿ ನೀರು ಕುಡಿಸಿ ಎಬ್ಬಿಸೋದಕ್ಕೆ ನೋಡಿದ್ವಿ.. ಎದ್ದೇಳಲಿಲ್ಲ. ದರ್ಶನ್‌ಗೆ ಫೋನ್ ಮಾಡಿದಾಗ ಡಾಕ್ಟರ್‌ನ ಕರೆಸಿ ಅಂತ ಹೇಳಿದ್ರು, ಗಡಿಬಿಡಿಯಲ್ಲಿ ಇಷ್ಟೆಲ್ಲಾ ಮಾಡೋ ಹೊತ್ತಿಗೆ ಸ್ವಾಮಿ ಪ್ರಾಣ ಹೋಗಿತ್ತು. ರಾತ್ರಿ 8 ಗಂಟೆ ತನಕ ಏನ್ ಮಾಡೋದು ಅಂತಾನೇ ಗೊತ್ತಾಗಲಿಲ್ಲ. ಚಿತ್ರದುರ್ಗದಿಂದ ಬಂದಿದ್ದ ರವಿಗೆ ಹೆಣ ಬಿಸಾಡೋದಕ್ಕೆ ಹೇಳಿದ್ವಿ, ಆದರೆ, ರವಿ ಭಯ ಬಿದ್ದು, ನಾನು ಹಾಗೇ ಮಾಡೋಲ್ಲ ಅಂದ. ವಿನಯ್, ಪ್ರದೋಷ್ ಅಣ್ಣ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ಆಮೇಲೆ ಕಾರ್ತಿಕ್ ಟೀಮನ್ನು ಪ್ರದೋಷ್‌ ಅಣ್ಣ ರೆಡಿ ಮಾಡಿದ್ರು. ರೇಣುಕಾಸ್ವಾಮಿ ಶವವನ್ನು ಕಾರ್ತೀಕ್ ಟೀಂ ತಗೊಂಡು ಹೋಯ್ತು ಅಂತಾ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿ-ಗ್ಯಾಂಗ್‌ನ ದೀಪಕ್ ಹೇಳಿದ್ದೇನು?
ಪಟ್ಟಣಗೆರೆ ಶೆಡ್‌ಗೆ ಬಿರಿಯಾನಿ ತರಿಸಿದ್ವಿ, ರೇಣುಕಾಸ್ವಾಮಿಗೆ ತಿನ್ನೋಕೆ ಬಿರಿಯಾನಿ ನೀಡಿದ್ವಿ. ಆದ್ರೆ, ನಾನು ಸಸ್ಯಹಾರಿ, ತಿನ್ನಲ್ಲ ಎಂದು ಸ್ವಾಮಿ ಹೇಳಿದ. ಆದರೂ, ಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ವಿ. ಸ್ವಾಮಿ ಬಿರಿಯಾನಿಯನ್ನು ತಿನ್ನದೇ ನೆಲಕ್ಕೆ ಉಗುಳಿದ್ದ, ಇದರಿಂದ ಸಿಟ್ಟಗೆದ್ದು ರೇಣುಕಾಸ್ವಾಮಿಯನ್ನು ಥಳಿಸಿದ್ವಿ, ಬಾಸ್ ಬರ್ತಾರೆ, ಒದೆ ತಿನ್ನೋಕೆ ರೆಡಿಯಾಗು ಅಂತಾನೂ ಹೇಳಿದ್ವಿ. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಅಂತಾ ಹೇಳಿದ್ವಿ ಎಂದು ಇಂಚಿಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿಯನ್ನ ಅಪಹರಿಸಿದ್ದು ಹೇಗೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿತ್ಯ ಹೊಸ-ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ರೇಣುಕಾಸ್ವಾಮಿಯನ್ನು ರಘು ಗ್ಯಾಂಗ್ ಜೂನ್ 8ರಂದು ಚಿತ್ರದುರ್ಗದಲ್ಲಿ ಪುಸಲಾಯಿಸಿ ಕಿಡ್ನಾಪ್ ಮಾಡಿತ್ತು. ಇದಕ್ಕೆ ಇಂದು ದೃಶ್ಯ ಸಾಕ್ಷ್ಯವೂ ಸಿಕ್ಕಿದೆ. ಜೂ.8ರಂದು ಬೆಳಗ್ಗೆ 9:56ಕ್ಕೆ ಕುಂಚಿಗನಾಳ್ ಬಳಿ ಸಿನಿಮೀಯ ರೀತಿಯಲ್ಲಿ ರೇಣುಕಸ್ವಾಮಿಯನ್ನು ರಘು ಗ್ಯಾಂಗ್ ಅಪಹರಿಸುತ್ತದೆ. ಆಟೋದಿಂದ ರೇಣುಕಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗುತ್ತದೆ. ಕುಂಚಿಗನಾಳ್ ಬಳಿಯ ಪೆಟ್ರೋಲ್ ಬಂಕ್ ಬಳಿ ಪ್ರಕರಣದ 7ನೇ ಆರೋಪಿ ಜಗ್ಗನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾರ್ಗಮಧ್ಯೆ ಗುಯಿಲಾಳು ಚೆಕ್‌ಪೋಸ್ಟ್‌ನಲ್ಲಿಯೂ ಇಟಿಯೋಸ್ ಕಾರು ಪಾಸ್ ಆಗುವ ಸಿಸಿಟಿವಿ ದೃಶ್ಯ ʻಪಬ್ಲಿಕ್ ಟಿವಿʼಗೆ ಲಭ್ಯ ಆಗಿದೆ. ಮಾರ್ಗಮಧ್ಯೆ ತುಮಕೂರಲ್ಲಿ ರೇಣುಕಾಸ್ವಾಮಿಯೇ ರಘು ಗ್ಯಾಂಗ್‌ಗೆ ತಿಂಡಿ ಕೊಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ತಡರಾತ್ರಿ ಚಿತ್ರದುರ್ಗದಲ್ಲಿ ರಘು ಗ್ಯಾಂಗ್ ಸಮ್ಮುಖದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ.

ಮಗನ ಬಂಧನದಿಂದ ಮನನೊಂದು ತಂದೆ ಸಾವು:
ಈ ಹೊತ್ತಲ್ಲೇ ಎ6 ಆರೋಪಿ ಜಗ್ಗ, ಎ7 ಆರೋಪಿ ಅನುಕುಮಾರ್ ಇಬ್ಬರನ್ನೂ ಚಿತ್ರದುರ್ಗ ಡಿವೈಎಸ್‌ಪಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಮಗನ ಬಂಧನ ವಿಚಾರ ತಿಳಿದು ತಂದೆ ಚಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಗ ಬರೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಕೂತಿದ್ದಾರೆ.

ಇನ್ನೂ ಆರೋಪಿ ಜಗದೀಶ್ ತಾಯಿ ಸುಲೋಚನಮ್ಮ ಪ್ರತಿಕ್ರಿಯಿಸಿ, ಯಾರ ಮಕ್ಕಳು ಕೊಲೆ ಆಗಬಾರದು. ಮಕ್ಕಳು ಸತ್ತರೇ ಆಗುವ ನೋವು ನನಗೂ ಗೊತ್ತು, ನನ್ನ ಮಗ ತಪ್ಪು ಮಾಡಿದರೆ ಶಿಕ್ಷೆ ಆಗಲಿ, ಆದ್ರೆ ನಿಜಾಂಶ ಬಯಲಾಗಬೇಕು ಎಂದು ಅಲವತ್ತುಕೊಡಿದ್ದಾರೆ. ಇತ್ತ, ಬೆಂಗಳೂರಲ್ಲಿ ಸ್ಕಾರ್ಪಿಯೋ ಮಾಲಿಕ ಪುನೀತ್ ಮತ್ತು ಶೆಡ್ ಕ್ಲೀನ್ ಮಾಡಿದ್ದ ಹೇಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈವರೆಗೂ ಸಿಕ್ಕಿಬಿದ್ದವರ ಆರೋಪಿಗಳ ಸಂಖ್ಯೆ 18ಕ್ಕೇರಿದೆ. ಎ-9 ಆರೋಪಿ ರಾಜು ಸದ್ಯ ಪೊಲೀಸರಿಂದ ಕಣ್ಮರೆಯಾಗಿದ್ದಾನೆ.

Share This Article