ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Case) ಆರೋಪಿಗಳ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್ (Actor Darshan) ಆಪ್ತ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಸುಬ್ರಮಣ್ಯ ಮತ್ತು ತಂಡ ಆತನನ್ನು ಬಂಧಿಸಿದೆ.
ಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಗುರುವಾರ ಬೆಳಗ್ಗೆ ಮಹತ್ವದ ತೀರ್ಪು ನೀಡಿತ್ತು. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶದ ಬೆನ್ನಲ್ಲೇ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸಂಜೆ 4:30 ಕ್ಕೆ ನಾನೇ ಬಂದು ಶರಣಾಗ್ತೀನಿ: ಪೊಲೀಸರಿಗೆ ದರ್ಶನ್ ಮಾಹಿತಿ
ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದರು.
ಈ ಆದೇಶದ ಬೆನ್ಬಲ್ಲೇ ದರ್ಶನ್ ಸಹ ಇಂದು (ಆ.14) ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಳನ್ನು ಬಂಧಿಸಲು ಪೊಲೀಸರು ಅವರ ಮನೆಗೆ ತೆರಳಿದ್ದಾರೆ. ಆರೋಪಿಗಳ ಪರ ವಕೀಲರು ಕಾಲಾವಕಾಶ ಕೇಳದ ಕಾರಣ ಆರೋಪಿಗಳು ಇಂದೇ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದನ್ನೂ ಓದಿ: ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?