ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ (Renukaswamy Kidnap & Murder Case) ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಆರೋಪಿ ಪವನ್ (Accused Pavan) ಮನೆಯಿಂದ 4 ಲಕ್ಷ 50 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ.
ವಿನಯ್ ತಾಯಿಗೆ ಪವನ್ 1 ಲಕ್ಷ ಅಡ್ವಾನ್ಸ್ ಹಣ ನೀಡಿದ್ದ. ಬಳಿಕ ವಿನಯ್‍ಗೆ ನೀಡಬೇಕಾಗಿದ್ದ ಹಣವನ್ನ ಪವನ್ ತನ್ನ ಮನೆಯಲ್ಲಿಟ್ಟಿದ್ದ. ಇದೀಗ ಪೊಲೀಸರು ಒಟ್ಟು 4 ಲಕ್ಷ 50 ಸಾವಿರವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಹಿಂದೆ 30 ಲಕ್ಷ ಸೀಜ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಲು, ಮೃತದೇಹ ಸಾಗಿಸಲು ಮತ್ತು ನಟ ದರ್ಶನ್ ಹೆಸರನ್ನು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ 30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು.
ಪ್ರಕರಣ ಸಂಬಂಧ ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.