ತುಮಕೂರು: ಡಿಸಿಎಂ ಹುದ್ದೆ ವಿರೋಧಿಸಿ ನಾನು ಸಹಿ ಸಂಗ್ರಹಿಸುತಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹಿಸಂಗ್ರಹಿಸುತ್ತಿದ್ದೇನೆ ಎನ್ನುವುದು ಸುಳ್ಳು. ಅಲ್ಲದೆ ಮುಖ್ಯಮಂತ್ರಿಗಳೂ ಅದಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವ ವದಂತಿಯೂ ಸುಳ್ಳು. ನಾನು ಸಹಿ ಸಂಗ್ರಹ ಮಾಡಿದ್ದೇನೆ ಎಂದು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಡಿಸಿಎಂ ಸ್ಥಾನದ ಬಗ್ಗೆ ಈಗಾಗಲೇ ಹೇಳಿಕೆ ಕೊಟ್ಟಿದ್ದೇನೆ. ಅಲ್ಲದೆ ಈ ವಿಚಾರವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇನೆ ಎಂದರು.
ನನಗೆ ಯಾರ ಮೇಲೂ ಅಸಮಾಧಾನ ಇಲ್ಲ. ನಾನು ಹಾದಿ ಬೀದಿಯಲ್ಲಿ ಮಾತನಾಡುತ್ತೇನೆ ಎಂದು ಕೆಲವರು ಆರೋಪ ಮಾಡುತ್ತಾರೆ. ಅಂಥವರೇ ಡಿಸಿಎಂ ಹುದ್ದಗೆ ನಾನು ಸಹಿ ಸಂಗ್ರಹಿಸುತ್ತಿದ್ದೇನೆ ಅಂತ ಹೇಳಿಕೆ ಕೊಡುತ್ತಾರೆ. ಹಾದಿ ಬೀದಿಯಲ್ಲಿ ಮಾತಾಡುತ್ತಿದ್ದಾನೆ ಎನ್ನುವವರು ನನ್ನ ವಿರುದ್ಧ ಕೇಂದ್ರಕ್ಕೆ ದೂರು ನೀಡಬಹುದಿತ್ತು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಆದರೆ ಮಾಧ್ಯಮದವರ ಮುಂದೆ ಏಕೆ ಮಾತನಾಡಿದರು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಹುದ್ದೆ ಬೇಡ ಎನ್ನುವುದು ಈ ನಾಡಿನ ಎಲ್ಲ ಜನರ ಭಾವನೆ. ಅನೇಕ ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಈ ವಿಚಾರದಲ್ಲಿ ನನಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರವನ್ನು ನಾನು ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸಿದ್ದೇನೆ ಎಂದು ತಿಳಿಸಿದರು.