ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮೌನ ವಹಿಸಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಸಿಎಂ ಹೇಳಿರುವ ಮಾತಿಗೆ ಟಾಂಗ್ ನೀಡಿ ಅಣೆ ಪ್ರಮಾಣದ ಸವಾಲು ಎಸೆದಿದ್ದಾರೆ.
ಸದನದಲ್ಲಿ ನನ್ನ ಹೆಸರನ್ನು ಮುರ್ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ಆದರೆ ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ. ಅಂದು ನಾನು ಗೋವಾಕ್ಕೆ ಹೋಗಿದ್ದು ನಿಜ. ಆದರೆ ನಾನು ಅವರಿಂದ ಸಚಿವನಾಗಲಿಲ್ಲ. ಅಂದು ಸರ್ಕಾರ ರಚಿಸಲು ಪ್ರಸ್ತಾಪ ಮಾಡಿದ್ದ ಅವರೇ ನಮ್ಮನ್ನ ಗೋವಾ ಹಾಗೂ ಹೈದರಾಬಾದ್ ಗೆ ಬಂದು ಮಧ್ಯರಾತ್ರಿ ಭೇಟಿ ಮಾಡಿದ್ರು. ತಮಗೆ ಬೆಂಬಲ ನೀಡಲು ಮನವಿ ಮಾಡಿದ್ದರು. ಆದರೆ ನಾನು ಅಂದು ಅವರೊಂದಿಗೆ ಜಗಳ ಮಾಡಿ ಬಿಎಸ್ ಯಡಿಯೂರಪ್ಪ ಅವರಿಗೆ ಮೋಸ ಮಾಡಲು ಒಪ್ಪಿರಲಿಲ್ಲ ಎಂದರು.
Advertisement
Advertisement
ಬಿಎಸ್‍ವೈ ಅವರಿಗೆ ಮೋಸ ಮಾಡಿದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ನಾನು ಸಿಎಂ ಅವರಿಗೆ ಹೇಳಿದ್ದೆ. ನಿನ್ನೆ ವಿಧಾನ ಸೌಧದಲ್ಲಿ ಮೌನ ವಹಿಸಲು ಒಂದು ಅರ್ಥ ಇದೆ. ಈಗ ಬಹಿರಂಗವಾಗಿ ಪ್ರಮಾಣ ಮಾಡಿ ಅಥವಾ ಬಹಿರಂಗ ಚರ್ಚೆ ಬನ್ನಿ ಎಂದರು. ಅಲ್ಲದೇ ನೀವು ಹೇಳಿದ್ದೆಲ್ಲಾ ಸಾಬೀತು ಆದರೆ ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ. ಸಿಎಂ ಅವರು ನಂಬಿರುವ ಶೃಂಗೇರಿ ಮತ್ತು ಮಂಜುನಾಥ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡಿ ಎಂದು ಸವಾಲು ಎಸೆದರು.
Advertisement
Advertisement
ದೇವೇಗೌಡರ ಕುಟುಂಬ ಸುಳ್ಳು ಹೇಳುವುದಲ್ಲಿ ನಿಸ್ಸೀಮರು, ನಾನು ನಿಮ್ಮ ಸಹಾಯದಿಂದ ಸಚಿವನಾಗಲಿಲ್ಲ, ನಮ್ಮನ್ನು ಉದ್ವೇಗಗೊಳಿಸುವ ಉದ್ದೇಶದಿಂದಲೇ ಸಿಎಂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಬಹುಮತವಿಲ್ಲದ ಸಿಎಂ ಅವರು ಮೊದಲು ರಾಜೀನಾಮೆ ನೀಡಬೇಕು. ಮುಂದಿನ ಅಧಿವೇಶನದಲ್ಲಿ ನಿಮ್ಮ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.