ಬೆಂಗಳೂರು: ದರ್ಶನ್ (Darshan) ಪ್ರಕರಣದಲ್ಲಿ ಯಾರೂ ಯಾವುದೇ ಹೇಳಿಕೆ ನೀಡಬೇಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದರೂ ಮದ್ದೂರು ಶಾಸಕ ಕದಲೂರು ಉದಯ್ ಗೌಡ (Kadalur Uday Gowda) ನಟನ ಪರ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಯಾಗಿದ್ದು ಸ್ವಲ್ಪ ಸಿಡುಕು ಹೊಂದಿದ್ದಾರೆ. ಕೊಲೆ (Murder) ಮಾಡುವಂತಹ ಬುದ್ಧಿ ದರ್ಶನ್‌ಗೆ ಇಲ್ಲ ಎಂದು ಉದಯ್ ಗೌಡ ಸರ್ಟಿಫಿಕೇಟ್ ನೀಡಿದ್ದಾರೆ.
ತುಂಬಾ ವರ್ಷಗಳಿಂದ ನಾನು ಮತ್ತು ದರ್ಶನ್ ಸ್ನೇಹಿತರಾಗಿದ್ದೇವೆ. ಇದು ಯಾಕೆ ಆಯ್ತು? ಏನಕ್ಕೆ ಆಯ್ತು ಅಂತ ನಮಗೆ ಮಾಹಿತಿ ಇಲ್ಲ. ತನಿಖೆಯಲ್ಲಿ ಸತ್ಯ ವಿಚಾರ ಗೊತ್ತಾಗುತ್ತದೆ. ಇಷ್ಟಂತೂ ಸತ್ಯ ದರ್ಶನ್ ಕೊಲೆಗಡುಕ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
ದರ್ಶನ್ ಅವರನ್ನು ಯಾರೂ ರಕ್ಷಣೆ ಮಾಡುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇಯಾಗಿದ್ದು ಯಾರನ್ನು ರಕ್ಷಣೆ ಮಾಡುವುದಿಲ್ಲ. ತಪ್ಪು ಮಾಡಿದರೆ ಕಾನೂನು ಪ್ರಕಾರವೇ ಶಿಕ್ಷೆ ಆಗುತ್ತದೆ ಎಂದರು.
ನಾವು ಪ್ರಭಾವ ಬೀರುವ ಹಾಗೇ ಇದ್ದರೆ ಅವರು ಜೈಲಿನಲ್ಲಿ ಇರುತ್ತಿದ್ದರಾ ಹೇಳಿ? ಯಾರು ಕೇಸ್ ಮೇಲೆ ಪ್ರಭಾವ ಬೀರಿಲ್ಲ. ಬೀರಿದ್ದರೆ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ. ಯಾರು ಇದರಲ್ಲಿ ಭಾಗಿ ಆಗುತ್ತಿಲ್ಲ. ಪಾರದರ್ಶಕವಾಗಿ ತನಿಖೆ ಆಗುತ್ತಿದ್ದು ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು.
ರೇಣುಕಾಸ್ವಾಮಿ ಕೊಲೆ ಖಂಡನೀಯ. ಅದರಲ್ಲಿ ಎರಡು ಮಾತಿಲ್ಲ. ಯಾರೇ ಕೊಲೆ ಮಾಡಿದರೂ ತಪ್ಪು. ಇದರಲ್ಲಿ ದರ್ಶನ್ ಪಾತ್ರ ಏನು? ಜೊತೆಯಲ್ಲಿ ಇರವವರು ಮಾಡಿದ್ದರಿಂದ ಸುತ್ತಿಕೊಂಡಿದೆಯಾ? ತನಿಖೆಯಿಂದ ಹೊರಗೆ ಬರಬೇಕು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.