– ಸಾವು ನಿರೀಕ್ಷೆ ಮಾಡಿಕೊಂಡು ಬದುಕೋ ಅನಿವಾರ್ಯತೆ ಆ ನಟಿಗೆ ಬಂದಿದ್ಯಾಕೆ..?
ಹಿಂದಿ ಚಿತ್ರ ಜಗತ್ತನ್ನ ಅನಭಿಷಿಕ್ತ ರಾಣಿಯಂತೆ ಆಳಿದ್ದ ಅಮೋಘ ನಟಿ ಮೀನಾ ಕುಮಾರಿ. ಆಕೆಯ ಸಿನಿಮಾ ಜೀವನ, ವೈಯಕ್ತಿಕ ಬದುಕು, ಪ್ರೇಮ, ದೋಖಾ, ಮುದ್ದಾಗಿ ಪೋಣಿಸಿ ಬರೆಯುತ್ತಿದ್ದ ಆಕೆಯ ಅಸಂಖ್ಯ ಕವಿತೆಗಳು.. ವಾಹ್.. ಆಕೆಯ ಜೀವನವೇ ಒಂದು ದೊಡ್ಡ ಗ್ರಂಥ. ಆಗಸ್ಟ್ 1 ಆಕೆಯ ಜನುಮದಿನ. ಇದು ಮೀನಾ ಕುಮಾರಿಯ ಬದುಕಿನ ಕುರಿತಾದ ಸ್ವಗತ ಬರಹ.. ಓವರ್ ಟು ಮೀನಾ ಕುಮಾರಿ..!
`ಬೊಂಬಾಯಿಯ ಮಲಬಾರ್ ಹಿಲ್ ನಲ್ಲಿದ್ದ ನರ್ಸಿಂಗ್ ಹೋಂ. ಇಲ್ಲೇ ಅಂದು ನಾನು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಾ ಇದ್ದದ್ದು. ಪ್ರತೀ ಉಸಿರನ್ನು ಎಳೆದುಕೊಳ್ಳೋ ಮುನ್ನ ನನ್ನ ಜೀವನದ ಸಿಹಿ-ಕಹಿ ಘಟನೆಗಳು ನೆನಪಾಗ್ತಿದ್ವು. ಒಮ್ಮೆ ಸಣ್ಣ ಕಿರುನಗೆ ತುಟಿಯಂಚಿನಲ್ಲಿ ಮಿಂಚಿ ಮರೆಯಾದ್ರೆ, ಮತ್ತೊಮ್ಮೆ ಮುತ್ತಿನಂತಾ ಕಣ್ಣ ಹನಿ ಜಿನುಗಿ ಸೊರಗಿದ ಕೆನ್ನೆಗಳ ಮೇಲೆ ಜಾರಿ ಹೋಗ್ತಿತ್ತು. ಅಂದ ಹಾಗೆ, ಅವತ್ತು ಹೀಗೆ ಭಗ್ನ ಹೃದಯಿಯಾಗಿ ಬಿಳೀ ಹಾಸಿನ ಮೇಲೆ ನಿಸ್ತೇಜಳಾಗಿ ಮಲಗಿದ್ದವಳ ನನ್ನನ್ನು ಜಗತ್ತು ಮೀನಾ ಕುಮಾರಿ ಅನ್ನೋ ಹೆಸರಿನಿಂದ ಕರೀತಿತ್ತು.
Advertisement
https://www.youtube.com/watch?v=PmbcRCCInf4
Advertisement
ವಿಶ್ವ ಗೆದ್ದ ಅಲೆಗ್ಸಾಂಡರನಷ್ಟೇ ವಯಸ್ಸಲ್ಲಿ ಇಂದು ನಾನು ಸಾವನ್ನು ಎದುರು ನೋಡುತ್ತಿದ್ದೇನೆ ಅನ್ನೋದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ನನಗೀಗ ಕೇವಲ ಮೂವತ್ತೊಂಭತ್ತರ ಹರೆಯ. ನನ್ನ ಸಾವು ಸಮೀಪಿಸ್ತಾ..? ನಂದು ಸಾಯೋ ವಯಸ್ಸಾ..? ಈ ಎಲ್ಲಾ ಗೊಂದಲಗಳ ನಡುವೆ ಹಾಸಿಗೆಗೆ ಅಂಟಿಕೊಂಡಂತೆ ಮಲಗಿದ್ದ ನಾನು ಅದೇ ಮೀನಾ ಕುಮಾರೀನಾ..? 40-50ರ ದಶಕದಲ್ಲಿ ಹೆಸರು ಹಿಂದಿ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಂತೆ ಆಳಿದವಳಿಗೆಎಂಥಾ ದುಸ್ಥಿತಿ ಬಂತು. ನನ್ನದು ಬರೀ ನೋವಿನ ಆಲಾಪಗಳಿಗೆ ಮೀಟುವ ವೀಣೆಯಂತಹಾ ಬದುಕಾಗಿಬಿಡ್ತು. ಸುಮಾರು ಎರಡು ದಶಕಗಳ ಕಾಲಹುಡುಗರ ನಿದ್ದೆ ಕದ್ದಿದ್ದೆ ನಾನು.
Advertisement
ಆಡಂಬರವಿಲ್ಲದ, ಮೊಂಡು ಮೂಗಿನ, ದೊಡ್ಡ ಕುಂಕುಮ ಇಟ್ಟುಕೊಳ್ಳುತ್ತಿದ್ದ ನಾನು ಅಷ್ಟೇನೂ ಸುಂದರಿಯಲ್ಲ. ಅದ್ರೆ, ನನ್ನ ಸೌಂದರ್ಯವನ್ನು ಒಮ್ಮೆ ಕಂಡವರು ಮತ್ತೆ ನನ್ನ ನೋಡದೆ ಇರೋದಕ್ಕೆ ಸಾಧ್ಯಾನೇ ಇರ್ಲಿಲ್ಲ. ಈ ಮೂವತ್ತೊಂಭತ್ತು ವರ್ಷಗಳ ಅವಧಿಯಲ್ಲಿ ನಾನು ಬರೋಬ್ಬರಿ 70 ಚಿತ್ರಗಳಲ್ಲಿ ನಟಿಸಿದ್ದೆ. ವೃತ್ತಿ ಜೀವನದ ಉತ್ತುಂಗದ ಇಪ್ಪತ್ತು ವರ್ಷಗಳಲ್ಲಿ ನನ್ನ ಜೊತೆಗೆ ಇದ್ದಿದ್ದು ಮೂರೇ. ಅವು ಸಿನಿಮಾ, ಶರಾಬು ಮತ್ತು ಗಂಡಸು. ಬಹುಶಃ ನಾನು ಬದುಕಿದ್ದೇ ಆ 20 ವರ್ಷವಷ್ಟೇ ಏನೋ. ತೊಟ್ಟು ತೊಟ್ಟಾಗಿ ಸಾವನ್ನ ಶರಾಬಿನ ರೂಪದಲ್ಲಿ ಹೀರಿದವಳಿಗೆ ಬದುಕಿನ ಅರ್ಥವೇ ಗೊತ್ತಿರ್ಲಿಲ್ಲ. ಅಥ್ವಾ ಅರಿವಿಗೆ ಬರೋ ಮುನ್ನವೇ ಎಲ್ಲವನ್ನೂ ಕಳೆದುಕೊಂಡು ನಡುಬೀದಿಯಲ್ಲಿ ಅರಣ್ಯ ರೋದನೆಯಲ್ಲಿ ತೊಡಗಿದ್ದೆ.
Advertisement
ನನಗೀಗಲೂ ನೆನಪಿದೆ. ಸಿನಿಮಾ ನಿರ್ದೇಶಕ, ಸ್ಕ್ರಿಪ್ಟ್ ರೈಟರ್ ಕೆ.ಎ. ಅಬ್ಬಾಸ್ ರಷ್ಯಾದಿಂದ ಬರೋವಾಗ ಗೊಂಬೆಯೊಂದನ್ನ ನನಗಾಗಿ ತಂದಿದ್ರು. ನನಗೋ ಗೊಂಬೆಗಳಂದ್ರೆ ಪಂಚಪ್ರಾಣ. ಗೊಂಬೆಯೊಳಗೊಂದು ಗೊಂಬೆ, ಗೊಂಬೆಯೊಳಗೊಂದು ಗೊಂಬೆ, ಗೊಂಬೆಯೊಳಗೊಂದು ಗೊಂಬೆ, ಹೀಗೆ ಆ ಗೊಂಬೆ ನಿಜಕ್ಕೂ ವಿಶೇಷವಾಗಿತ್ತು. ನನ್ನ ಮುಂಬೈಯ ಅಲಿಷಾನ್ ಬಂಗ್ಲೆ ಗೊಂಬೆಗಳ ದೊಡ್ಡ ಮ್ಯೂಸಿಯಂ ಮಾದರಿಯಲ್ಲಿ ಪರಿವರ್ತಿತವಾಗಿತ್ತು. ನಾನೆಂದೂ ಮಣ್ಣಿನಲ್ಲಿ ಆಡುವ, ಕಣ್ಣು ಮಿಟುಕಿಸಿ ಚೇಷ್ಟೆ ಮಾಡೋ, ಕಾಡಿ-ಬೇಡೋ ಅಥ್ವಾ ಕೈ ತಟ್ಟಿ ನಗೋ ಮಗುವಾಗಿಯೇ ಇರ್ಲಿಲ್ಲ. ಯಾಕಂದ್ರೆ, ನಾನು ಬಹಳ ಸಣ್ಣ ವಯಸ್ಸಿಗೆ ಅಪ್ಪ ಅಮ್ಮನ ಕಣ್ಣಿಗೆ ದುಡ್ಡು ತರೋ ಮೆಷಿನ್ ಆಗ್ಬಿಟ್ಟಿದ್ದೆ.’
ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಮೀನಾ ಮತ್ತೆ ಹಳೆಯ ನೆನಪುಗಳನ್ನು ಮೆಲುಕು ಹಾಕತೊಡಗಿದ್ಲು.
`ಹುಟ್ತಾನೇ ದುರಾದೃಷ್ಟವನ್ನು ಹೊದ್ದುಕೊಂಡು ಹುಟ್ಟಿದ್ದೆ ನಾನು. 1933ರ ಅಗಸ್ಟ್ 1ರಂದು ನಾನು ಹುಟ್ಟಿದಾಗ ಮನೆಯಲ್ಲಿ ಒಬ್ಬರ ಮುಖದಲ್ಲೂ ನಗು ಮೂಡಿರಲಿಲ್ಲವಂತೆ. ಅಪ್ಪ ಅಲಿ ಬಕ್ಷ್ ಹಾಗೂ ಅಮ್ಮ ಇಕ್ಬಾಲ್ ಬೇಗಂ ಅವರ ದಾಂಪತ್ಯದ ಪ್ರತಿಫಲವಾಗಿ ಹುಟ್ಟಿದ್ದೆ ನಾನು. ಆಗ ಅಪ್ಪನಿಗೆ ಗಂಡು ಮಗು ಬೇಕು ಅನ್ನೋ ಬಯಕೆ ಇತ್ತಂತೆ. ಎಷ್ಟಾದ್ರೂ ನಾಟಕ ಕಂಪನಿಯೊಂದ್ರಲ್ಲಿ ಕೆಲಸ ಮಾಡಿ ಜೀವನ ನಡೆಸ್ತಿದ್ದ. ಹೀಗಾಗಿ ಮುಂದೆ ತನಗೆ ಅಸರೆಯಾಗೋಕೆ ಮಗನನ್ನ ಅಪೇಕ್ಷೆಪಟ್ಟಿದ್ದ. ಹೀಗಾಗಿ, ನನ್ನ ಹುಟ್ಟು ತಂದೆಗೆ ಎಷ್ಟು ಅಸಮಾಧಾನ ತರಿಸಿತ್ತು ಅಂದ್ರೆ, ನನ್ನನ್ನ ಅನಾಥಾಶ್ರಮದ ಬಾಗಿಲಲ್ಲಿ ಬಿಟ್ಟು ಹೋಗಿದ್ದ. ಮುಂದೆ ಅದೇನನಿಸ್ತೋ, ಮತ್ತೆ ಆತ್ಮಸಾಕ್ಷಿಯ ಕರೆಗೆ ಕರಗಿದ್ದವನು ನನ್ನ ಎತ್ತಿಕೊಳ್ಳೋಕೆ ಬಂದಿದ್ದನಂತೆ. ಆಗ ನನ್ನ ಮೈಯಲ್ಲೆಲ್ಲಾ ಇರುವೆಗಳು ಮುತ್ತಿಕೊಂಡಿದ್ವು ಅಂತಿದ್ದ. ಸಿಟ್ಟಿಗೆದ್ದಾಗಲೆಲ್ಲಾ, ನಿನ್ನ ಅವತ್ತೇ ಬಿಟ್ಟು ಕೈ ತೊಳೆದುಕೊಳ್ಳಬೇಕಾಗಿತ್ತು ಅಂತಿದ್ದ. ಹೀಗೆ ಹುಟ್ಟಿಸಿದವನಿಗೇ ಬೇಡವಾಗಿದ್ದ ನಾನು, ಬಾಲ್ಯವನ್ನ ಅತ್ಯಂತ ಯಾತನಾಮಯವಾಗಿ ಕಳೆದುಬಿಟ್ಟಿದ್ದೆ.
https://www.youtube.com/watch?v=3K0fQq3CsI8
ಆಟವಾಡೋಕೆ ಹೋಗ್ತೀನಿ, ಶಾಲೆಗೆ ಹೋಗ್ತೀನಿ ಅನ್ನೋ ಸುಂದರ ಸ್ವಪ್ನಗಳನ್ನು ಕಾಣೋ ಹೊತ್ತಿಗೆ ಅಪ್ಪ ನನ್ನನ್ನು ದುಡಿಯೋಕೆ ಹಾಕಿದ್ದ. ಗಂಡು ಮಗುವನ್ನ ಅಪೇಕ್ಷಿಸಿದ್ದ ನನ್ನಪ್ಪ ನಾನು ಹೆಣ್ಣು ಅನ್ನೋದನ್ನೇ ಮರೆತು ದುಡಿಮೆಯ ಆಳಾಗಿ ಕಂಡಿದ್ದ. ನಾನೂ ಓದಬೇಕಪ್ಪಾ ಅಂತಾ ಅದೆಷ್ಟು ಗೋಗರೆದ್ರೂ ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡೋದಕ್ಕೆ ಹಚ್ಚಿಬಿಟ್ಟ. ಹಾಂ, ಅಂದಹಾಗೆ ಹುಟ್ಟಿದ ತಪ್ಪಿಗೋ ಏನೋ ಅಪ್ಪ ಮ್ಹಜಾಮೀನ್ ಬಾನು ಅನ್ನೋ ಹೆಸರಿಟ್ಟಿದ್ದ. ಮುಂಬಯಿಯ ರೂಪತಾರಾ ಸ್ಟುಡಿಯೋದಿಂದ ಆರಂಭವಾಗಿತ್ತು ನನ್ನ ಬಣ್ಣದ ಲೋಕದ ಯಾತ್ರೆ. ಲೆದರ್ ಫೇಸ್, ಅಧೂರಿ ಕಹಾನಿ, ಪೂಜಾ, ನಯೀ ರೋಷನಿ, ಬಹನ್, ಕಸೌಟಿ, ಗರೀಬ್ ಅನ್ನೋ ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದೆ. ನನ್ನಅಭಿನಯ ನೋಡಿಮೆಚ್ಚಿಕೊಂಡವರು ಅದೆಷ್ಟು ಜನ… ಆದ್ರೆ, ಬಹಳ ಬೇಗ ನನ್ನ ಹೆಸರು ಮಜಹಬೀನ್ ನಿಂದ ಮೀನಾ ಕುಮಾರಿ ಅನ್ನೋದಾಗಿ ಬದಲಾಗಿ ಹೋಗಿತ್ತು. ಇದ್ರ ಹಿಂದೆ ಕೂಡಾ ಒಂದು ರೋಚಕ ಕಥೆ ಇತ್ತು. ನಾನು ಬಹಳ ಮುದ್ದು ಮುದ್ದಾಗಿದ್ದ ಹುಡುಗಿ. ಹೀಗಾಗಿ ನಾನು ಥೇಟ್ ದೇವತೆಯನ್ನ ಹೋಲ್ತಿದ್ದೆ ಅನ್ತಿದ್ರು ಜನ. ಆಗ ಚಿತ್ರ ಜಗತ್ತಿನ ಪ್ರತಿಷ್ಠಿತ ಬಸಂತ್ ಸ್ಟುಡಿಯೋದವರ ಕಣ್ಣಿಗೆ ನಾನು ಬಿದ್ದಿದ್ದೆ. ಲಕ್ಷ್ಮೀ ನಾರಾಯಣ ಅನ್ನೋ ಭಕ್ತಿ ಪ್ರಧಾನ ಚಿತ್ರದ ಒಂದು ಪಾತ್ರಕ್ಕಾಗಿ ನನ್ನ ಆಯ್ಕೆ ಮಾಡಿದ್ರು.
ಆಗ ನಾನು ಕಡಿಮೆ ಮೊತ್ತಕ್ಕೆ ಸಿಗುವ ಹಾಗೂ ಸಿನಿಮಾ ಹಿನ್ನೆಲೆಯುಳ್ಳ ನಟಿಯಾಗಿದ್ದರಿಂದ ಚಿತ್ರಕ್ಕೆ ನನ್ನ ಆಯ್ಕೆ ಸುಲಭವಾಗಿತ್ತು. ಆದ್ರೆ, ಇಲ್ಲಿ ನಿರ್ಮಾಪಕರಿಗೊಂದು ಉಭಯ ಸಂಕಟ ಶುರುವಾಯ್ತು. ಸುನ್ನಿ ಮುಸ್ಲಿಂ ಹುಡುಗಿಯಿಂದ ಹಿಂದೂ ದೇವತೆಯ ಪಾತ್ರ ಮಾಡಿಸಿದ್ರೆ, ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತೆ. ಇನ್ನು ಸಿನಿಮಾ ಗೆಲ್ಲೋದು ಮರೀಚಿಕೆಯೇ. ಹೀಗಾಗಿ, ಚಿತ್ರ ನಿರ್ಮಾಣ ಹಂತದಲ್ಲೇ ಮಜಹಬೀನ್ ಆಗಿದ್ದ ನಾನು ಮೀನಾ ಕುಮಾರಿಯಾಗಿ ಬದಲಾಗಿ ಹೋದೆ. ಅದು 1946ನೇ ಇಸವಿ. ಆಗ ನಾನು 14ರ ಹರೆಯಕ್ಕೆ ಕಾಲಿಟ್ಟಿದ್ದೆ. ಬಚ್ಚೋ ಕಾ ಖೇಲ್ ಅನ್ನೋ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಾನು ಅಯ್ಕೆಯಾಗಿದ್ದೆ. ಇಲ್ಲೇ ನನ್ನ ಹೆಸರು ಬೇಬಿ ಮೀನಾಳಿಂದ ಮೀನಾ ಕುಮಾರಿಯಾಗಿ ಬದಲಾಗಿತ್ತು. ಬಾಲ್ಯದಿಂದಲೇ ನಾಟಕ ಸಂಸ್ಥೆಯಲ್ಲಿ ನಟನೆಯನ್ನೇ ನೋಡುತ್ತಾ ಬೆಳೆದ ನನಗೆ ಇದೆಲ್ಲಾ ಕಷ್ಟ ಅಂತಾ ಅನಿಸ್ಲೇ ಇಲ್ಲ.
ಹೆಣ್ಣಿನ ಭಾವನೆ, ಬವಣೆಗಳ ನಾನಾ ಮುಖಗಳನ್ನು ನೋಡುಗರ ಮನಮುಟ್ಟುವಂತೆ ಅಭಿನಯಿಸೋ ಕಲೆ ನನಗೆ ಕರಗತವಾಗಿತ್ತು. ಹೀಗಾಗಿ, ಕೆಲವೇ ದಿನಗಳಲ್ಲೇ ಸಿನಿರಸಿಕರ ನಡುವೆ ಖ್ಯಾತಳಾಗಿಬಿಟ್ಟಿದ್ದೆ ನಾನು. ಆದ್ರೆ, ಚಿತ್ರರಂಗಕ್ಕೆ ಬಂದು ಪ್ರಸಿದ್ಧಿ ಪಡೆದಿದ್ರೂ ನಮ್ಮ ಮನೆಯ ಗೋಳೇನೂ ತೀರಿರ್ಲಿಲ್ಲ. ಅಪ್ಪನ ಪಾಲಿಗೆ ನಾನು ನೋಟು ಸುರಿಸೋ ಯಂತ್ರವಾಗಿಬಿಟ್ಟಿದ್ದೆ. ಯಾವ ಚಿತ್ರಗಳನ್ನು ಆಯ್ಕೆ ಮಾಡ್ಬೇಕು, ಸಂಭಾವನೆ ಎಷ್ಟು ತಗೋಬೇಕು ಹೀಗೆ ಎಲ್ಲವನ್ನೂ ಅಪ್ಪನೇ ಡಿಸೈಡ್ ಮಾಡ್ತಿದ್ದ.
ಆಗ ನನ್ನ ಮತ್ತು ಕಮಲ್ ಅಮ್ರೋಹಿ ಅನ್ನೋ ಚಿತ್ರ ನಿರ್ದೇಶಕನ ಪ್ರೀತಿ ಪಯಣದ ನೆನಪಾಯ್ತು. ಮೀನಾ ಆ ನೋವಲ್ಲೂ ಫಳಕ್ಕನೆ ನಕ್ಕಳು. ‘ಕಮಲ್ ಮತ್ತು ನನ್ನ ಭೇಟಿ ಕೂಡಾ ಒಂದು ವಿಚಿತ್ರ ಸನ್ನಿವೇಶದಲ್ಲಾಗಿತ್ತು. ನನಗೆ ಕಮಲ್ ಗೊತ್ತಿಲದೇ ಇದ್ರೂ ನಾನು ಚಿಕ್ಕವಳಿರೋವಾಗ್ಲೇ ಅವ್ರ ಸಿನಿಮಾದಲ್ಲಿ ನಟಿಸೋದಕ್ಕೆ ಯಾರೋ ನನ್ನ ಹೆಸರನ್ನ ಸೂಚಿಸಿದ್ರಂತೆ. ಆಗ ನಾನಿನ್ನೂ ಬೇಬಿ ಮೀನಾ ಆಗಿದ್ದೆ. ಆಗ ಕಮಲ್ ಜೈಲರ್ ಹೆಸರಿನ ಸಿನಿಮಾ ಮಾಡ್ತಿದ್ರು. ಅಲ್ಲಿ ಬಾಲ ನಟಿಯೊಬ್ಬಳ ಅವಶ್ಯಕತೆ ಇತ್ತು. ಆಗ ನನ್ನ ಹೆಸರು ತೇಲಿ ಬಂದಾಗ ಕಮಲ್ ತಿರಸ್ಕರಿಸಿದ್ದರಂತೆ. ನೋಡ್ತಾ ನೋಡ್ತಾ ನಾನು ಬೆಳೆದು ದೊಡ್ಡವಳಾಗಿಬಿಟ್ಟಿದ್ದೆ. ಆಗ ಕಮಲ್ ಮಹಲ್ ಅನ್ನೋ ಸಿನಿಮಾ ತಯಾರು ಮಾಡೋದಕ್ಕೆ ಅಂತಾ ಓಡಾಡ್ತಿದ್ರು. ಆಗಲೂ ಹೀರೋಯಿನ್ ಗಾಗಿ ಕಮಲ್ ಹುಡುಕಾಡ್ತಿದ್ದಾಗ ಯಾರೋ ನನ್ನ ಹೆಸರನ್ನ ಸೂಚಿಸಿದ್ರಂತೆ.
ಆದ್ರೆ, ಆಗ್ಲೂ ನನ್ನ ಬದಲಾಗಿ ಅಲ್ಲಿ ಮಧುಬಾಲಾಳನ್ನ ಸಿನಿಮಾಗಾಗಿ ಕಮಲ್ ಅಮ್ರೋಹಿ ಆಯ್ಕೆ ಮಾಡಿದ್ರು. ಸನ್ನಿವೇಶಗಳು ಎಂಥಾ ವಿಚಿತ್ರವಾಗಿರುತ್ತೆ ನೋಡಿ. ಮಧುಬಾಲಾ ಹಾಗೂ ಕಮಲ್ ಅಮ್ರೋಹಿ ಆಗ ಪರಸ್ಪರ ಇಷ್ಟಪಡ್ತಿದ್ರು ಅನ್ನೋ ಸುದ್ದಿ ನನ್ನ ಕಿವಿಗೂ ಬಿದ್ದಿತ್ತು. ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು. ಕಮಲ್ ಮತ್ತು ನನ್ನ ಭೇಟಿ ಅಲ್ಲೂ ಸಾಧ್ಯವಾಗಿರ್ಲಿಲ್ಲ. ಇದಾದ ಬಳಿಕ ತಮಾಷಾ ಅನ್ನೋ ಸಿನಿಮಾದ ಸೆಟ್ ನಲ್ಲಿ ನಟ ಅಶೋಕ್ ಕುಮಾರ್ ಕಮಲ್ ಅಮ್ರೋಹಿಗೆ ನನ್ನ ಪರಿಚಯ ಮಾಡಿಕೊಟ್ಟಿದ್ರು. ಬಾಲನಟಿಯಾಗಿದ್ದ ನಾನು ಇಷ್ಟೊಂದು ಬದಲಾಗಿದ್ದು ನೋಡಿ ಕಮಲ್ ಅಮ್ರೋಹಿ ಇಂಪ್ರೆಸ್ ಆಗಿದ್ದ. ಸಿನಿಮಾದಲ್ಲಿ ನನ್ನ ನಟನಾ ಚಾತುರ್ಯ ನೋಡಿ ಸಾಕಷ್ಟು ಬಾರಿ ಕಾಂಪ್ಲಿಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದ. ಮುಂದೆ ಅನಾರ್ಕಲಿ ಅನ್ನೋ ಸಿನಿಮಾ ಮಾಡೋ ಸಂದರ್ಭದಲ್ಲೂ ಮಧುಬಾಲಾಳನ್ನ ಆಯ್ಕೆ ಮಾಡಿದ್ದ ಕಮಲ್ ಅಮ್ರೋಹಿ. ಆದ್ರೆ, ಅಲ್ಲಿ ಮಧುಬಾಲಾ ಸಿನಿಮಾದಲ್ಲಿ ನಟಿಸೋದ್ರಿಂದ ಹಿಂದೆ ಸರಿದಿದ್ಲು. ಆಗ ಕಮಲ್ ಅನಾರ್ಕಲಿ ಪಾತ್ರಕ್ಕಾಗಿ ನನ್ನ ಆಯ್ಕೆ ಮಾಡಿದ್ದ. ಆದ್ರೆ, ಸಿನಿಮಾ ಶೂಟಿಂಗ್ ಶುರುವಾಗೋ ಮೊದಲೇ ಸಣ್ಣ ಆಕ್ಸಿಡೆಂಟ್ ನಲ್ಲಿ ನಾನು ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೆ.
ಇದೇ ಸಂದರ್ಭ ನನ್ನ ಹಾಗೂ ಕಮಲ್ ನಡುವೆ ಒಂದು ರೀತಿಯ ವಿಶೇಷ ಬಾಂಧವ್ಯ ಬೆಳೆಯೋದಕ್ಕೆ ಕಾರಣವಾಗಿತ್ತು. ಆದ್ರೆ, ಅಲ್ಲೂ ಸಿನಿಮಾದಲ್ಲಿ ನನ್ನ ಕೈ ಬಿಡ್ತಾರಾ ಅನ್ನೋ ಅನುಮಾನಗಳು ನನ್ನನ್ನ ಕಾಡದೇ ಇರ್ಲಿಲ್ಲ. ಯಾಕಂದ್ರೆ, ಬರೋಬ್ಬರಿ 5 ತಿಂಗಳ ಕಾಲ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀಬೇಕಾಯ್ತು. ಆದ್ರೆ, ಕಮಲ್ ಮಾತ್ರ ಪ್ರತೀ ವಾರ ನನ್ನ ನೋಡೋದಕ್ಕೆ ಅಂತಾ ಆಸ್ಪತ್ರೆಗೆ ಬರೋದಕ್ಕೆ ಶುರು ಮಾಡಿದ್ರು. ಅದೊಂದು ದಿನ ಬಂದಿದ್ದ ಕಮಲ್ ಮೊಣಕೈಯಲ್ಲಿ ರಕ್ತ ಒಸರ್ತಿತ್ತು. ‘ಮೇರೀ ಅನಾರ್ಕಲಿ’ ಅಂತಾ ಬರೆದು ಕೆಳಗಡೆ ತನ್ನ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದ ಕಮಲ್. ಈ ರೀತಿ ಯಾಕೆ ಮಾಡಿದೆ ಅಂತಾ ಕೇಳಿದಾಗ ಅಂದೇ ತನ್ನ ಮನಸ್ಸಿನಲ್ಲಿರೋದನ್ನ ಕಮಲ್ ನನ್ನ ಬಳಿ ಹೇಳಿಕೊಂಡಿದ್ದ. ಹೌದು, ನನ್ನ ಊಹೆ ನಿಜವಾಗಿತ್ತು. ಕಮಲ್ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋದಕ್ಕೆ ಶುರುಮಾಡಿದ್ದ.
ಅನಾರ್ಕಲಿ ಸಿನಿಮಾ ಏನೋ ಅರ್ಧಕ್ಕೆ ನಿಂತೋಯ್ತು. ಆದ್ರೆ, ಕಮಲ್ ಮತ್ತು ನಾನು ಮದುವೆಯಾಗೋ ನಿರ್ಧಾರಕ್ಕೆ ಬಂದಿದ್ದೆವು. ನನಗಿಂತ 15 ವರ್ಷ ದೊಡ್ಡವನಾದ ಕಮಲ್ ಅಮ್ರೋಹಿಯ ಕೈ ಹಿಡಿದೆ ನಾನು. ಯಾವ ಕಮಲ್ ತನಗೆ ಮದುವೆಯಾಗಿದೆ, ಹೆಂಡತಿಯನ್ನ ಬಿಡೋಕೆ ಸಾಧ್ಯವಿಲ್ಲ ಅಂತಾ ಮಧುಬಾಲಾಳ ಪ್ರೀತಿಗೆ ಮೋಸ ಮಾಡಿದ್ನೋ, ಅದೇ ಕಮಲ್ ಈಗ ನನ್ನ ಕೈ ಹಿಡಿದಿದ್ದ. ಆದ್ರೆ, ಆಗಿನ್ನೂ 18ರ ಹೊಸ್ತಿಲಲ್ಲಿದ್ದ ನಾನು ವಿವಾಹಿತನೊಬ್ಬನ ಪ್ರೀತಿಯಲ್ಲಿ ಬೀಳೋದಕ್ಕೆ ಹೇಗೆ ಸಾಧ್ಯವಾಯ್ತು..? ಹುಚ್ಚು ಮನಸ್ಸು.. ಕೆಲವೊಮ್ಮೆ ಎಂಥಾ ಅವಿವೇಕಿ ನಿರ್ಧಾರ ತಾಳುತ್ತೆ ಅಂತಾ ಗೊತ್ತಾಗೋದಕ್ಕೆ ನನಗೆ ಹೆಚ್ಚು ಸಮಯ ತಗುಲಿರಲಿಲ್ಲ.
ಕಮಲ್ ಅಮ್ರೋಹಿ.. ಅಂದು ಅದೇ ಕಮಲ್ ಅಮ್ರೋಹಿಯೇ ತಾನೇ ಆಸ್ಪತ್ರೆಯಲ್ಲಿದ್ದ ನನ್ನನ್ನ ನೋಡೋಕೆ ಅಂತಾ ಬರ್ತಿದ್ದಿದ್ದು. ಇಂದು ನಾನು ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ಅವಧಿಯಲ್ಲಿ ಅವನದ್ದೇ ನಿರೀಕ್ಷೆಯಲ್ಲಿದ್ದೇನೆ. ನನ್ನ ಹದಿನೆಂಟನೇ ವಯಸ್ಸಿನಲ್ಲಿ ಅದಾಗ್ಲೇ ಸಂಸಾರವಂದಿಗನಾಗಿದ್ದ ಕಮಲ್ ಅಮ್ರೋಹಿಯ ಕೈ ಹಿಡಿದಿದ್ದೆ ನಾನು. ಯೌವನದ ತೀವ್ರತೆಯಲ್ಲಿ ಅದ್ಯಾವುದೂ ಗೊತ್ತೇ ಅಗ್ಲಿಲ್ಲ ನೋಡಿ. ಅಪ್ಪ ಅಮ್ಮನಿಗೆ ಗೊತ್ತಾಗದೆ ಕದ್ದುಮುಚ್ಚಿ ಕಮಲ್ ಕೈ ಹಿಡಿದವಳು ನಾನು. ಹೀಗಾಗಿ, ಮನೆಯಿಂದ ಹೊರ ಹಾಕಲ್ಪಟ್ಟಿದ್ದೆ. ಮನೆ ಬಿಟ್ಟು ಸೀದಾ ಕಮಲ್ ಅಮ್ರೋಹಿ ಮನೆಗೆ ಬಂದಿದ್ದೆ. ಅದ್ರೆ, ಕಮಲ್ ಅದಾಗ್ಲೇ ಶೂಟಿಂಗ್ ಸೆಟ್ ನಲ್ಲಿದ್ದ ಆದ್ರೆ, ಯಾವಾಗ ನಾನು ಬಂದಿದ್ದೀನಿ ಅಂತಾ ಗೊತ್ತಾಯ್ತೋ ಓಡೋಡಿ ನನಗಾಗಿ ಬಂದಿದ್ದ.
https://www.youtube.com/watch?v=fj6wcKdiuCo
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಕಮಲ್ ಕೈ ಹಿಡಿದಿದ್ದ ನನಗೆ ಯಾವುದ್ರಲ್ಲೂ ಕಮ್ಮಿ ಇರದ ಹಾಗೆ ನೋಡಿಕೊಂಡಿದ್ದ. ಯಾವಾಗ ಅಮ್ರೋಹಿ ಮಧುಬಾಲಾಳನ್ನ ಪಕ್ಕಕ್ಕಿಟ್ಟು ನನ್ನನ್ನ ನಾಯಕಿಯಾಗಿ ಆಯ್ಕೆ ಮಾಡಿದ್ನೋ ಆಗಲೇ ನಾನು ಅರ್ಧ ಗೆದ್ದಿದ್ದೆ. ಈಗ, ಕಮಲ್ ನನ್ನ ಜೀವನದಲ್ಲಿ ಇದ್ದಾನೆ ಅನ್ನೋದನ್ನ ನೆನಪಿಸಿಕೊಳ್ತಿದ್ದಂತೆ ಸಂಪೂರ್ಣವಾಗಿ ಗೆದ್ದು ಬೀಗಿದ್ದೆ. ನಮ್ಮಿಬ್ಬರ ಮದುವೆ ಸುದ್ದಿ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಮದುವೆಯಾದ ಬಳಿಕ ಕೆಲಸ ಹಾಗೂ ಕಮಲ್ ಇವೆರಡೇ ಪ್ರಪಂಚವಿದ್ದಿದ್ದು ನನಗೆ. ಇದೇ ಹಂತದಲ್ಲಿ ಫುಟ್ ಪಾತ್, ಅಮರ್ಬಾನಿ, ಬಂದೀಶ್, ಸತರಂಗ್, ಬಿಝು ಬಾವರಾ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಆಫರ್ ಗಳ ಸುರಿಮಳೆಯೇ ಬಂತು.
ಬಿಝು ಬಾವರಾ ಸಿನಿಮಾ ಸಕ್ಸಸ್ ಕಂಡ ಬಳಿಕ ನಾನು ಮತ್ತು ಅಮ್ರೋಹಿ 1952ರಲ್ಲಿ ನಮ್ಮದೇ ಸ್ವಂತ ಬಂಗಲೆ ಖರೀದಿಸಿದ್ದೆವು. ಅದ್ರ ಹೆಸ್ರು ಅಲೀಶಾನ್ ಅಂತಾ ಇಟ್ವಿ. ಇನ್ನೇನು ಬೇಕಿತ್ತು ನನಗೆ. ನಾನು ಕಮಲ್‍ನನ್ನು ಚಂದನ್ ಅಂತಾ ಕರೀತಿದ್ದೆ. ಅವನು ನನ್ನನ್ನ ಮಂಜು ಅಂತಾ ಕರೀತಿದ್ದ. ಸುಖದ ಉತ್ತುಂಗದಲ್ಲಿದ್ದೆವು ನಾವು. ಕಮಲ್ ನನಗೆ ದಿನಾ ಒಂದಲ್ಲಾ ಒಂದು ಉಡುಗೊರೆ ತಂದುಕೊಡ್ತಿದ್ದ. ಇನ್ನು ನಾನು, ಅವಕ್ಕೆ ಬದಲಾಗಿ ನಾನೇ ಕೈಯ್ಯಾರೆ ಬರೆದ ಕವನಗಳನ್ನು ಅವನಿಗೆ ನೀಡಿ ಖುಷಿ ಪಡಿಸ್ತಿದ್ದೆ. ನಮ್ಮಿಬ್ಬರ ದಾಂಪತ್ಯ ಗೀತೆ ಬಹಳ ಸುಂದರವಾಗೇನೋ ಇತ್ತು. ಆದ್ರೆ, ಅದೊಂದು ವಿಷಯಕ್ಕೆ ಮಾತ್ರ ನಮ್ಮಿಬ್ಬರ ನಡುವೆ ಆಗಾಗ ವಾಗ್ವಾದಗಳು ಏಳ್ತಾನೇ ಇದ್ವು. ಕಮಲ್ ಅಮ್ರೋಹಿಗೆ ನನ್ನಿಂದ ಸಿಗೋ ಸುಖವಷ್ಟೇ ಬೇಕಾಗಿತ್ತು. ಅದ್ರೆ, ನಮ್ಮಿಬ್ಬರ ಪ್ರೀತಿಯ ಫಲವಾಗಿ ಹುಟ್ಟೋ ಕುಡಿಗಳ ಮೇಲೆ ಆತನಿಗೆ ಆಸಕ್ತಿ ಇರ್ಲಿಲ್ಲ. ಹೀಗಾಗಿ, ನಾನು ಬರೀ ಭೋಗದ ವಸ್ತುವಾಗಿ ಹೋದೆ. ನಮ್ಮಿಬ್ಬರ ದಾಂಪತ್ಯಕ್ಕೆ ಕೇವಲ ಸುಖವೊಂದೇ ಸಾಕ್ಷಿಯಾಯ್ತು.
ನನಗೋ ನನ್ನದೇ ಆದ ಮಕ್ಕಳಿರಬೇಕು ಅನ್ನೋ ಆಸೆ. ಇದಕ್ಕಾಗಿ ಕಮಾಲ್ ಜೊತೆ ಹಲವಾರು ಬಾರಿ ಜಗಳಕ್ಕೆ ನಿಂತಿದ್ದೆ. ಆದ್ರೆ, ತನ್ನ ಮಾಜಿ ಪತ್ನಿಯಿಂದ ಹುಟ್ಟಿದ್ದ ಮಕ್ಕಳಿದ್ದಾರಲ್ಲ, ಅವರನ್ನೇ ನೋಡಿಕೋ ಅನ್ನೋ ಕಮಲ್ ಉತ್ತರ ಕೇಳಿ ಕರುಳು ಕಿವುಚಿದ ಹಾಗಾಗ್ತಿತ್ತು. ಹೀಗಾಗಿ, ಎಲ್ಲಾ ಇದ್ರೂ ಅವಾಗಾವಾಗ ಒಂಟಿತನ ಅನ್ನೋದು ಇನ್ನಿಲ್ಲದಂತೆ ಕಾಡುತ್ತಿತ್ತು. ಮುಂಬೈನ ಅತ್ಯಂತ ಶ್ರೀಮಂತ ಅಲೀಶಾನ್ ಅನ್ನೋ ಬಂಗ್ಲೆ ನಮ್ಮದಾಗಿತ್ತು. ಐಶಾರಾಮಿ ವಾಹನಗಳಲ್ಲಿ ಪ್ರವಾಸ ಕೂಡ ಮಾಡಿದ್ದೆ. ಆದ್ರೆ, ನನಗೆ ಯಾವತ್ತೂ ಹಣವೇ ಎಲ್ಲವೂ ಆಗಿರ್ಲಿಲ್ಲ. ಗ್ಲಾಮರಸ್ ಲೋಕದಲ್ಲಿನ ಯಶಸ್ವಿ ಪಯಣದ ಹೊರತಾಗಿಯೂ ಅಬ್ಬಾಸ್ ರ ಚಾರ್ ದಿಲ್ ಚಾರ್ ರಾಹೆ ಯಲ್ಲಿ ಮುಖಕ್ಕೆ ಮಸಿ ಬಳಿದುಕೊಂಡು ಡಿಗ್ಲ್ಯಾಮ್ ಆಗಿ ಕಾಣಿಸ್ಕೊಂಡಿದ್ದೆ.
ಸದಾ ಸೌಮ್ಯ ಹಾಗೂ ಶಾಂತವಾದ ಪಾತ್ರಗಳನ್ನೇ ಹೆಚ್ಚು ಆಯ್ದುಕೊಳ್ತಿದ್ದೆ. ಆದ್ರೆ, ನನ್ನೊಳಗೆ ಅವ್ಯಕ್ತವಾಗಿದ್ದ ಭಯ, ಕೋಲಾಹಲವನ್ನು ಅದುಮಿಟ್ಟುಕೊಂಡು ಹೊರಜಗತ್ತಿಗೆ ನಾನು ಸುಖಿ ಅಂತ ತೋರಿಸಿಕೊಂಡೆ. ಇದೆಲ್ಲವನ್ನೂ ಹೇಳಿಕೊಳ್ಳೋಕೆ ನನಗಿದ್ದಿದ್ದು ನನ್ನ ಶಾಯರಿ ಬರೆಯುವ ಹವ್ಯಾಸವೊಂದೇ. ನಾಝ್ ಅನ್ನೋ ಹೆಸರಿನಲ್ಲಿ ಕವನ ಬರೀತಿದ್ದೆ. ನನ್ನದೇ ಸಂಪಾದನೆ ಇದ್ರೂ ಅದನ್ನ ಸಂಪೂರ್ಣವಾಗಿ ಕಮಲ್ ಅಮ್ರೋಹಿಯೇ ನಿಯಂತ್ರಿಸ್ತಿದ್ದ. ನಾನೇನಾದ್ರೂ ಒಡವೆ ಮಾಡಿಸ್ಬೇಕು ಅಂದ್ರೂ ಅವನ ಅನುಮತಿಯನ್ನು ಕೇಳಿಯೇ ಮಾಡಿಸ್ಬೇಕಾಗಿತ್ತು. ನನ್ನ ಸಂಪಾದನೆಯ ಮೇಲೆ ನನಗೆ ಹಕ್ಕೇ ಇಲ್ಲದಂತೆ ಮಾಡಿಬಿಟ್ಟಿದ್ದ.
ಇನ್ನು ನನ್ನ ಲಾಕರ್ ಕೀ ಕೂಡಾ ನನ್ನ ಬಳಿ ಇರ್ತಿರ್ಲಿಲ್ಲ. ಹೀಗಾಗಿ ದಿನೇ ದಿನೇ ಇಡೀ ಕುಟುಂಬದಿಂದ ನಾನು ವಿಮುಖಳಾಗ್ತಾನೇ ಬಂದಿದ್ದೆ. ನಾನು ಮೊದಲಿನಿಂದಲೂ ನನ್ನ ಕುಟುಂಬದವರಿಗೆ ಹಣದ ಭದ್ರತೆ, ಜೀವನ ಭದ್ರತೆ, ಸಹಾನುಭೂತಿ, ಪ್ರೀತಿ ಎಲ್ಲವನ್ನೂ ಕೊಟ್ಟಿದ್ದೆ. ಆದ್ರೆ, ನನಗೆ ಕೊನೇ ಪಕ್ಷ ಕಣ್ಣೀರು ಹಾಕೋಕೆ ಒಂದು ಮಾನವೀಯತೆಯ ಹೆಗಲೂ ಸಿಗಲಿಲ್ಲ. ಮದುವೆಯಾದ ಬಳಿಕವಾದ್ರೂ ನಾನು ಸುಖವಾಗಿ ಇರಬಹುದು ಅಂದ್ಕೊಂಡೆ. ಆದ್ರೆ, ಮದುವೆಯ ಬಂಧನದ ಒಳಗೂ ಹೊರಗೂ ನನ್ನದು ಅಂತಾ ಹೇಳಿಕೊಳ್ಳೋದು ಏನೂ ಇರಲೇ ಇಲ್ಲ. ಮುದ್ದಾಗಿದ್ದ ನನ್ನ ತುಟಿಗಳಿಗೆ, ಮುಗ್ಧವಾಗಿದ್ದ ನನ್ನ ಕೆನ್ನೆಗಳಿಗೆ ಸಮಯ ಎಂಥಾ ಮುತ್ತಿಟ್ಟಿತ್ತು ನೋಡಿ. ಆದ್ರೆ, ನನ್ನ ಪತಿ ಅನಿಸಿಕೊಂಡವನಿಗೆ ಮಾತ್ರ ನನ್ನ ಮುದ್ದಿಸಬೇಕು ಅಂತಾ ಅನಿಸುತ್ತಿರ್ಲಿಲ್ಲ. ಈ ಹಂತದಲ್ಲಿ ನಾನು ನನ್ನ ಭಾವನೆಗಳನ್ನ ಅಕ್ಷರ ರೂಪಕ್ಕಿಳಿಸಿದ್ದೆ.
ಹೃದಯದಲಿ ಮತ್ತೆ ನೋವಿನುಬ್ಬರ
ಮತ್ಯಾವುದೋ ಮರೆತು ಹೋದ ನೆನಪು
ಉರಿಯೆಬ್ಬಿಸುವ ಹಳೆಯ ಪಿಸುಮಾತು
ಎಲ್ಲ ಸೇರಿಸಿ ಕುಟುಕುತ್ತದೆ ಕಳೆದ ಧೂರ್ತ ರಾತ್ರಿ
ಹೃದಯದಲಿ ಮತ್ತೆ ನೋವಿನುಬ್ಬರ
ಮತ್ಯಾವುದೋ ಮರೆತು ಹೋದ ನೆನಪು
ಭರವಸೆಯ ಬಣ್ಣ ಇಳಿಯುತ್ತವೆ ಹೀಗೆ
ಸಾವು ನನ್ನ ಹೆಸರನ್ನೇ ಹಿಡಿದು ಕರೆದ ಹಾಗೆ.
ಕಮಲ್ ಜೊತೆಗಿನ ಸಂಬಂಧದಲ್ಲಿ ಅದಾಗ್ಲೇ ದೊಡ್ಡ ಬಿರುಕು ಮೂಡಿಯಾಗಿತ್ತು. ಭಾವಜೀವಿಯಾಗಿದ್ದ ನಾನು ಕಮಲ್ ವರ್ತನೆಯಿಂದ ನೊಂದು ದೂರ ಸರಿಯೋ ನಿರ್ಧಾರಕ್ಕೆ ಬಂದಿದ್ದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪತಿಯಿಂದ ದೂರವಾಗಿ ಏಕಾಂತ ಅನ್ನೋ ಕಾಳರಾತ್ರಿಯಲ್ಲಿ ಬಿದ್ದು ವಿಲ ವಿಲ ಒದ್ದಾಡಿಬಿಟ್ಟೆ. ಆದ್ರೆ, ನಾನು ಯಾವತ್ತು ವಿಚ್ಛೇದನ ಬಯಸ್ಲೇ ಇಲ್ಲ. ಮುಂದೆಂದೂ ಏಳದ ರೀತಿಯಲ್ಲಿ ದೊಡ್ಡ ಹೊಡೆತವೇ ಬಿದ್ದಿತ್ತು. ಕಥೆ ಕವನಗಳನ್ನು ಬರೆಯೋದನ್ನ ಅಭ್ಯಾಸ ಮಾಡ್ಕೊಂಡೆ. ಒಂದು ಬಗೆಯ ಪ್ರೇಮಾನ್ವೇಷಣೆ, ಸೋಲು, ಬೆಂಬಿಡದ ಏಕಾಂತ, ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ನಿದ್ರೆ ಮಾಡೋದನ್ನೇ ಮರೆತುಬಿಟ್ಟಿದ್ದೆ. ಈ ನಿದ್ರಾಹೀನತೆಯಿಂದ ಮುಕ್ತಿ ಪಡೆಯೋಕೆ ಕೆಲವೇ ಮಿಲಿಯಷ್ಟು ಬ್ರಾಂಡಿಯ ಸೇವನೆಗೆ ಮುಂದಾಗಿದ್ದೆ. ಮುಂದೆ ಅದೇ ಅಭ್ಯಾಸ ಚಟವಾಗಿತ್ತು. ಮನಸ್ಸಿನ ನೋವಿಗೆ ಮದ್ಯದ ಕಹಿಯೇ ಔಷಧಿಯೆಂದು ಭಾವಿಸಿಬಿಟ್ಟಿದ್ದೆ .
ಅದೊಂದು ದಿನ ಎಷ್ಟು ಚೀಪಾಗಿ ನಡೆದುಕೊಂಡು ಬಿಟ್ಟಿದ್ದ. ಕಳ್ಳತನವನ್ನು ಮೀನಾಳೇ ಮಾಡಿದ್ಲು ಅನ್ನೋ ಆರೋಪ ಹೊರಿಸಿಬಿಟ್ಟ. ಅಂದೇ ಮೀನಾ ಪತ್ರವೊಂದನ್ನ ಬರೆದು ಮನೆ ಬಿಟ್ಟಿದ್ಲು. ಈ ಘಟನೆ ನೆನಪಾಗುತ್ತಿದ್ದ ಹಾಗೆ, ಮೀನಾ ಮತ್ತೆ ಮಗುವಿನಂತೆ ಮುಖ ಮುಚ್ಚಿ ಅತ್ಲು. ಆದ್ರೆ, ಆಸ್ಪತ್ರೆಯಲ್ಲಿ ಸಮಾಧಾನ ಮಾಡೋರು ಯಾರೂ ಇರ್ಲಿಲ್ಲ.
ನನ್ನ ಬದುಕಿನ ದುರಂತ ಅಧ್ಯಾಯ ಶುರುವಾಗಿದ್ದು ಬಾಲ್ಯದಿಂದಲೇ. ಆದ್ರೆ, ಅದೆಲ್ಲವನ್ನೂ ಕಮಲ್ ಮರೆಸಿದ್ದ. ಅದೊಂದು ಕಾರ್ ಅಪಘಾತದಲ್ಲಿ ಬೆರಳುಗಳ ಸಹಜತೆಯನ್ನೇ ಕಳೆದುಕೊಂಡು ಬಿಟ್ಟಿದ್ದೆ. ಸಾವು-ಬದುಕಿನ ನಡುವೆ ಹೋರಾಡಿದ್ದೆ. ಟೈಫಾಯ್ಡಿನಿಂದ ಒದ್ದಾಡಿದ್ದೆ. ಏಳು ವರ್ಷಗಳವರೆಗೆ ಗುಣಮುಖವಾಗದ ವಿಚಿತ್ರ ರೋಗ ಒಂದನ್ನು ಹೊತ್ತು ಅಲೆದಾಡಿದ್ದೆ. ಆದ್ರೆ, ಅದ್ಯಾವುದೂ ಈ ನೋವಿನ ಮುಂದೆ ದೊಡ್ಡದು ಅಂತಾ ಅನಿಸ್ಲೇ ಇಲ್ಲ.
https://www.youtube.com/watch?v=-_t8RVlTQ6A
ಕಮಲ್ ಅಮ್ರೋಹಿಯಿಂದ ದೂರವಾದ ಬದುಕು ಹಳಿ ತಪ್ಪಿತ್ತು. ಈ ಹಂತದಲ್ಲಿ ಗಂಡುಗಳ ದೊಡ್ಡ ದಂಡೇ ನನ್ನ ಜೀವನದಲ್ಲಿ ಮುದ್ರೆಯೊತ್ತಿ ಹೋಗಿದ್ರು. ಧರ್ಮೇಂದರ್, ಗುರುದತ್, ರಾಹುಲ್ ಎಷ್ಟು ಬೇಕು. ಆದ್ರೆ, ಕೊನೆಗೆ ನನಗಿಂತ ವಯಸ್ಸಿನಲ್ಲಿ ಕಿರಿಯನಾದ ರಾಹುಲ್ ನನ್ನು ಆರ್ಯ ಸಮಾಜದ ಪದ್ಧತಿಯಲ್ಲಿ ಮದುವೆಯಾಗಿದ್ದೆ. ಸುಖ ಅಂತಾ ಅಲ್ಲದಿದ್ರೂ ನನಗೂ ಒಬ್ಬ ಸಂಗಾತಿ ಸಿಕ್ಕನಲ್ಲ ಅನ್ನೋ ಸಣ್ಣ ತೃಪ್ತಿಯಾದ್ರೂ ನನಗಿತ್ತು. ಆದ್ರೆ, ಅಷ್ಟರಲ್ಲಾಗ್ಲೇ ನನ್ನ ತೆಕ್ಕೆಯಲ್ಲಿದ್ದ ರಾಹುಲ್ ವಿನಾಕಾರಣ ಕೈ ಕೊಟ್ಟು ಹೋಗಿದ್ದ. ಬಾಹು ಬಂಧನ ಬಯಸಿ ಬರುತ್ತಿದ್ದ ಗಂಡಸರು ನನ್ನನ್ನ ಬಳಸುತ್ತಿದ್ದರಷ್ಟೇ ಹೊರತು ಪ್ರೀತಿಸಲೇ ಇಲ್ಲ. ಸಿನಿಮಾ, ಗಂಡಸರು, ಕೊನೆಗೆ ಬಾಟಲಿ ಎಲ್ಲವೂ ಬರಿದಾಗ್ತಾ ಹೋಗಿದ್ವು.
ಆಜಾದ್, ಕಾಜಲ್, ಸಾಹೀಬ್ ಬೀವಿ ಔರ್ ಗುಲಾಮ್, ಫುಟ್ ಪಾತ್ ಹೀಗೆ ಸಾಲು ಸಾಲು ಚಿತ್ರಗಳು ನನ್ನನ್ನ ಉತ್ತುಂಗಕ್ಕೇರಿಸಿದ್ದೇನೋ ನಿಜ. ಆದ್ರೆ, ಈಗ ಕೈಯ್ಯಲ್ಲಿ ಯಾವ ಸಿನಿಮಾನೂ ಇರ್ಲಿಲ್ಲ. ಈ ನಡುವೆ ವಿಪರೀತವಾದ ಮದ್ಯ ಸೇವನೆಯಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ನನ್ನ ಪರಿಚಯಸ್ಥರೇ ಕರ್ಕೊಂಡು ಹೋದ್ರು. ಈ ಹಂತದಲ್ಲಿ ಮಾತ್ರ ನಾನು ಅನಿವಾರ್ಯವಾಗಿ ಮದ್ಯ ಸೇವನೆಯನ್ನು ಬಿಡ್ಲೇಬೇಕಾಯ್ತು. 1961ರಲ್ಲಿ ನಿರ್ಮಾಣವಾಗಬೇಕಿದ್ದ ಕಮಲ್ ಅಮ್ರೋಹಿಯ ಪಾಕಿಜಾ ಚಿತ್ರವನ್ನು ನಾನು ಮುಗಿಸಿಕೊಡಲೇಬೇಕಾಗಿತ್ತು. ನಿರಂತರ ಹತ್ತು ವರ್ಷಗಳ ಕಾಲ ಎಳೆದಾಡಿದ್ದ ಚಿತ್ರವದು. ಕೊನೆಗೂ 1971ರಲ್ಲಿ ತಯಾರಾಯ್ತು.
ಅವನದೇನಿದ್ದರೂ ಸಂಬಂಧಗಳಿಗಿಂತ ಹಣದ ಲೆಕ್ಕಾಚಾರವೇ ಹೆಚ್ಚು. ನನ್ನೆಲ್ಲಾ ತಲ್ಲಣಗಳನ್ನೂ ಬದಿಗಿಟ್ಟು ಮತ್ತೆ ನನ್ನಲ್ಲಿ ಜೀವ ತುಂಬಿಸಿ ಅಭಿನಯ ತೆಗೆಸಿದ್ದ. ಈ ಚಿತ್ರಕ್ಕಾಗಿ ನಾನು ಆತನಿಂದ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದಿದ್ದೆ. ಲಿವರ್ ಸಿರೋಸಿಸ್ ನನ್ನನ್ನ ಸಂಪೂರ್ಣವಾಗಿ ತಿಂದು ಹಾಕಿಬಿಟ್ಟಿತ್ತು. ನನ್ನ ದೇಹದಲ್ಲಿ ರಕ್ತಕ್ಕಿಂತಲೂ ಶರಾಬಿನ ಪ್ರಮಾಣವೇ ಹೆಚ್ಚಾಗಿತ್ತು. ಪಾಕಿಜಾ ಚಿತ್ರ ನಿರ್ಮಾಣ ಮುಗಿಯೋ ಮುನ್ನ ನನ್ನ ಹಾಗೂ ಕಮಲ್ ಮನಸ್ತಾಪವೇನೋ ಮುಗಿದಿತ್ತು. ಆದ್ರೆ, ಹೇಳಿಕೊಳ್ಳುವಂತಹಾ ಬಾಂಧವ್ಯದ ಕೊರತೆ ಖಂಡಿತಾ ಇತ್ತು.
ಈ ನಡುವೆ ನನ್ನ ಸಾವು ಹತ್ತಿರ ಬರ್ತಿದೆ ಅಂತಾ ಗೊತ್ತಾದಾಗ, ನಟಿ ಮುಮ್ತಾಜಳಿಂದ ಪಡೆದಿದ್ದ ಹಣವನ್ನ ವಾಪಸ್ ಕೊಡೋದಕ್ಕೆ ಸಾಧ್ಯವಾಗದೆ ನನ್ನ ಬಂಗ್ಲೆಯನ್ನೇ ಆಕೆಗೆ ಕೊಟ್ಟುಬಿಟ್ಟೆ. ಆಸ್ಪತ್ರೆಗೆ ಸೇರೋ ಮುನ್ನ ಅತ್ತು ಬಂದು ತಬ್ಬಿಕೊಂಡಿದ್ದ ಮನೆಕೆಲಸದಾಕೆಗೂ ಕೈ ತುಂಬಾ ಹಣ ಕೊಟ್ಟಿದ್ದೆ. ಹೌದು, ನನಗೆ ಪ್ರೀತಿ ಮತ್ತು ಮಮತೆ ಹೊರತಾಗಿ ಇನ್ನೇನು ಬೇಕಾಗಿರ್ಲಿಲ್ಲ. ಬದುಕು ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿತ್ತು.
https://www.youtube.com/watch?v=IFEwzBJlpb4
ಇದು ಮೀನಾಳ ಬದುಕಿನ ಕಥೆ. ಸಾವನ್ನ ನಿರೀಕ್ಷೆ ಮಾಡಿಕೊಂಡೇ ಬದುಕೋದು ಇದ್ಯಲ್ಲಾ, ಅದು ಯಾರಿಗೂ ಬಾರದೇ ಇರಲಿ.. ಮುದ್ದಾದ ಮೌನ ಆವರಿಸಿದ್ದ ಆಕೆಯ ಮುಖ, ಸಾವಿರ ಮಾತಾಡೋ ಆ ಕಣ್ಣುಗಳು, ಆಕೆಯ ಭಾವನೆಗಳಿಗೆ ಬಣ್ಣ ತುಂಬುತ್ತಿದ್ದ ಈಕೆಯ ಕವನಗಳ ಮೂಲಕವಷ್ಟೇ ಇಂದಿಗೂ ಹಸಿರಾಗಿದ್ದಾಳೆ. ಮೀನಾ ಕುಮಾರಿ 1972ರ ಮಾರ್ಚ್ 31ರಂದು ಬಾರದ ಲೋಕಕ್ಕೆ ಹೊರಟೇಬಿಟ್ಟಿದ್ಲು. ಆಕೆ ಸಾವನ್ನಪ್ಪಿದ ಬಳಿಕ ಕಮಲ್ ಅಮ್ರೋಹಿ ಹೇಳಿದ್ದಿಷ್ಟೇ: ಆಕೆ ತನಗಾಗಿ ಎಂದೂ ಜೀವಿಸಲಿಲ್ಲ. ಆಕೆ ಪ್ರೀತಿಯಲ್ಲಿ ಬೀಳೋದನ್ನ ಒಪ್ಪುತ್ತಿರಲಿಲ್ಲ. ಇದೊಂದು ಪಾಪ ಅನ್ನುವಂತೆ ಮಾತಾಡ್ತಿದ್ಲು. ಜೀವಂತಿಕೆಯೇ ಇಲ್ಲದ ಜೀವನವನ್ನು ಜೀವಿಸೋದಕ್ಕಿಂತ ಸಾವಿರ ಸಲ ಸಾಯೋದೇ ಮೇಲು ಅಂತಿದ್ಲು. ಆದ್ರೆ, ತನ್ನ ಅಹಮ್ಮಿಕೆಯ ಗಡಿ ದಾಟಿ ಪ್ರೀತಿಯ ಹಿಂದೆ ಓಡಿದ್ಲು. ಕವಿತೆಯನ್ನೇ ಕನಸಾಗಿಸಿದ್ಲು. ಅದ್ರಂತೆಯೇ ಬದುಕು ಮುಗಿಸಿದ್ಲು.
– ಕ್ಷಮಾ ಭಾರದ್ವಾಜ್