ನವದೆಹಲಿ: ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ಕಂಗೆಟ್ಟಿದ್ದ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ.
ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 42,336 ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.
ಮೊದಲೇ ಆರ್ಥಿಕ ನಷ್ಟದಲ್ಲಿದ್ದ ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಂ ಹಣವನ್ನು ಪಾವತಿ ಮಾಡುವ ಸಂಬಂಧ ತಲೆಕೆಡಿಸಿದ್ದಾಗ ಕೇಂದ್ರ ಸರ್ಕಾರ ಪಾವತಿ ಅವಧಿಯನ್ನು 2 ವರ್ಷಗಳ ಕಾಲ ಮುಂದೂಡಿದೆ. ಕಂಪನಿಗಳು 2020-21, 2021-22 ವರ್ಷಕ್ಕೆ ಪಾವತಿಸಬೇಕಾದ ಹಣವನ್ನು 2022-23ರ ಹಣಕಾಸು ವರ್ಷದಲ್ಲಿ ಪಾವತಿಸಬೇಕು ಎಂದು ಸೂಚಿಸಿದೆ. ಇದರ ಜೊತೆ ವಿಸ್ತರಣೆಗೊಂಡ ಅವಧಿಗೆ ತಗಲುವ ಬಡ್ಡಿಯನ್ನು ಸಹ ಪಾವತಿಸಬೇಕೆಂದು ಹೇಳಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?
ಭಾರತಿ ಏರ್‌ಟೆಲ್ 11,746 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 23,920 ಕೋಟಿ ರೂ., ರಿಲಯನ್ಸ್ ಜಿಯೋ 6,670 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ
ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಏರ್‌ಟೆಲ್ ಹಾಗೂ ವೊಡಾಫೋನ್ 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್ 23.8 ಲಕ್ಷ, ವೊಡಾಫೋನ್ 25.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಜಿಯೋ ಮತ್ತು ಬಿಎಸ್‍ಎನ್‍ಎಲ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋಗೆ 69.83 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾದರೆ, ಬಿಎಸ್‍ಎನ್‍ಎಲ್‍ಗೆ 7.37 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ವೊಡಾಫೋನ್ 37.24 ಕೋಟಿ, ರಿಲಯನ್ಸ್ ಜಿಯೋ 35.52 ಕೋಟಿ, ಏರ್‌ಟೆಲ್ 32.55 ಕೋಟಿ, ಬಿಎಸ್‍ಎನ್‍ಎಲ್ 11.69 ಕೋಟಿ ಹಾಗೂ ಎಂಟಿಎನ್‍ಎಲ್ 33.93 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.