ಮುಂಬೈ: ಸೇವೆ ಆರಂಭಗೊಂಡು ಮೂರು ತಿಂಗಳು ಉಚಿತ ಕರೆ ಮತ್ತು ಡೇಟಾ ನೀಡಿ ಪ್ರಸ್ತುತ ಈಗ ಕೇವಲ ಡೇಟಾಗೆ ಮಾತ್ರ ಶುಲ್ಕ ವಿಧಿಸುತ್ತಿರುವ ಜಿಯೋ ಸೆಪ್ಟೆಂಬರ್ ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 271 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.
ವ್ಯವಹಾರದ ಮಾಹಿತಿಯನ್ನು ಬಿಡುಗಡೆ ಮಾಡಿರುವ ಜಿಯೋ ಒಟ್ಟು 271 ಕೋಟಿ ರೂ. ನಷ್ಟ ಅನುಭವಿಸಿದರೆ, 6150 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದೆ.
Advertisement
ಒಟ್ಟು ದೇಶದಲ್ಲಿ 13.8 ಕೋಟಿ ರೂ. ಗ್ರಾಹಕರನ್ನು ಜಿಯೋ ಹೊಂದಿದ್ದು, ವೈರ್‍ಲೆಸ್ ಡೇಟಾ ಟ್ರಾಫಿಕ್ ಎರಡನೇ ತ್ರೈಮಾಸಿಕದಲ್ಲಿ ಜಿಯೋ ಒಟ್ಟು 3.78 ಶತ ಕೋಟಿ ಜಿಬಿ ಆಗಿದೆ.
Advertisement
ಯಾವ ಕಂಪೆನಿಯ ಮಾರುಕಟ್ಟೆಯ ಪಾಲು ಎಷ್ಟಿದೆ?
ಏರ್‍ಟೆಲ್ 23.70%, ವೊಡಾಫೋನ್ 17.74%, ಐಡಿಯಾ 16.34%, ಜಿಯೋ 10.83%, ಬಿಎಸ್‍ಎನ್‍ಎಲ್ 8.81%, ಏರ್‍ಸೆಲ್ 7.58%, ರಿಲಯಾನ್ಸ್ 6.85% ಮಾರುಕಟ್ಟೆ ಹೊಂದಿದೆ.
Advertisement
ಜಿಯೋಗೆ ಲಾಸ್ ಆಗಿದ್ದು ಎಲ್ಲಿ?
ಇಂಟರ್ ಕನೆಕ್ಟ್ ಯೂಸೇಜ್ ಜಾರ್ಜ್(ಐಯುಸಿ) ನಿಂದಾಗಿ ಜಿಯೋಗೆ ನಷ್ಟ ವಾಗುತ್ತಿದೆ. ಸೆಪ್ಟೆಂಬರ್ ವರೆಗೆ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇತ್ತು. ಐಯುಸಿ ನಿಗದಿ ಪಡಿಸಿದ್ದಕ್ಕೆ ಜಿಯೋ ವಿರೋಧ ವ್ಯಕ್ತಪಡಿಸಿದ್ದು, ನಾವು ಕರೆಗೆಂದೇ ಪ್ರತ್ಯೇಕವಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರ್‍ಟೆಲ್ 480 ಕೋಟಿ ರೂ. ಜಿಯೋದಿಂದ ಸೇವಾ ಶುಲ್ಕ ಪಡೆದಿದೆ.
Advertisement
ಏನಿದು ಐಯುಸಿ?
2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ ಐಯುಸಿ ಬೆಲೆಯನ್ನು ನಿಗದಿಪಡಿಸಿತ್ತು. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ಏರ್‍ಟೆಲ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ಏರ್‍ಟೆಲ್ ಪಾವತಿಸಬೇಕಾಗುತ್ತದೆ.
ಐಯುಸಿಯಿಂದಾಗಿ ಏರ್‍ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ. ಕಳೆದ ವರ್ಷ ದೇಶದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಏರ್‍ಟೆಲ್ 10,279 ಕೋಟಿ ರೂ. ಆದಾಯವನ್ನು ಗಳಿಸಿದ್ದು, ಈ ಹಿಂದೆ 14 ಪೈಸೆಯಿಂದ 30 ಪೈಸೆಗೆ ಏರಿಸಬೇಕೆಂಬ ಪ್ರಸ್ತಾಪವನ್ನು ಟ್ರಾಯ್ ಮುಂದಿಟ್ಟಿತ್ತು. ಪ್ರಸ್ತುತ ಐಯುಸಿ ಕಡಿಮೆ ಇದ್ದು, ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಏರ್‍ಟೆಲ್ ಮನವಿ ಮಾಡಿತ್ತು
ಜಿಯೋ ವಿರೋಧ ಯಾಕೆ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ.
ಹೊಸ ಐಯುಸಿ:
ಟ್ರಾಯ್ ಪ್ರತಿ ನಿಮಿಷಕ್ಕೆ 6 ಪೈಸೆ ಐಯುಸಿ ದರವನ್ನು ನಿಗದಿ ಪಡಿಸಿದ್ದು, ಹೊಸ ಐಯುಸಿ ದರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. 2020ರ ಜನವರಿಯಿಂದ ಸಂಪೂರ್ಣವಾಗಿ ಐಯುಸಿಯನ್ನು ಕಿತ್ತು ಹಾಕಲು ಟ್ರಾಯ್ ಮುಂದಾಗಿದೆ. ಟ್ರಾಯ್ ಹೊಸ ಐಯುಸಿ ಜಾರಿ ಮಾಡಿದ್ದನ್ನು ಪ್ರಶ್ನಿಸಿ ವೊಡಾಫೋನ್ ಬಾಂಬೆ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದು, ನವೆಂಬರ್ 15 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ದೀಪಾವಳಿಗೆ ಜಿಯೋ ಗಿಫ್ಟ್: 399 ರೂ. ರಿಚಾರ್ಜ್ ಮಾಡಿ ಫುಲ್ ಕ್ಯಾಶ್‍ಬ್ಯಾಕ್ ಪಡೆಯಿರಿ