ಯಾದಗಿರಿ: ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆಯು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ನಡೆದಿದೆ.
ಪೂಜಮ್ಮ, ತುಂಬು ಗರ್ಭಿಣಿಯಾಗಿರುವುದರಿಂದ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಹಾಗಾಗಿ ಪೂಜಮ್ಮ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ನರಳಾಡುವಂತಾಗಿದೆ. ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕಕ್ಕೇರಾಕ್ಕೆ ತೆರಳದೆ ತತ್ತರಿಸಿ ಹೋಗಿದ್ದಾರೆ. ಅದೇ ರೀತಿ ಗ್ರಾಮದ ಸಂಪರ್ಕ ಕಡಿದುಕೊಂಡ ಕಾರಣ ಶಾಲಾ ಶಿಕ್ಷಕ ಬಸನಗೌಡ ಕೂಡ ಸೋಮವಾರದಿಂದ ಗ್ರಾಮದಲ್ಲೇ ತಂಗಿದ್ದಾರೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ಬಸವಸಾಗರ ಡ್ಯಾಂಗೆ ಹೆಚ್ಚು ನೀರು ಹರಿಸಿದರೆ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ. ಸದ್ಯ ಬಸವಸಾಗರ ಡ್ಯಾಂ ನಿಂದ 1,28,000 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ನೀಲಕಂಠರಾಯನಗಡ್ಡಿ ಸಂಪರ್ಕ ಕಳೆದುಕೊಂಡಿದೆ. ಪ್ರವಾಹ ಭೀತಿ ಎದುರಾಗುವ ಸಂಭವ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿ ಪಾತ್ರದ ಜನರಿಗೆ ನದಿ ಕಡೆ ತೆರಳದಂತೆ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv