ಬೆಂಗಳೂರು: ಮೈತ್ರಿ ಸರ್ಕಾರ ಪತನವಾದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರಗೊಂಡಿದ್ದು, ಹೆಚ್ಚು ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತಿದ್ದಾರೆ. ಇದೀಗ ವಿಶ್ರಾಂತಿಗಾಗಿಯೇ ಮಲೇಷ್ಯಾಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ವಿದೇಶ ಪ್ರವಾಸಕ್ಕೆ ಎಚ್.ಡಿ.ಕುಮಾರಸ್ವಾಮಿ ತೆರಳಿದ್ದು, ನಿನ್ನೆ ತಡ ರಾತ್ರಿ ಇಬ್ಬರು ಆಪ್ತರೊಂದಿಗೆ ವಿಮಾನ ಹತ್ತಿದ್ದಾರೆ. ನಾಲ್ಕು ದಿನಗಳ ಕಾಲ ಮಲೇಷ್ಯಾದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಇತ್ತೀಚೆಗೆ ನೆರೆ ಪೀಡಿತ ಪ್ರದೇಶಗಳಲ್ಲಿ ಎಚ್‍ಡಿಕೆ ಪ್ರವಾಸ ಮಾಡಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ್ದರು. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಮಾತಿನ ಯುದ್ಧವೇ ನಡೆದಿತ್ತು, ಇಬ್ಬರು ನಾಯಕರು ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರು. ಇದೀಗ ಎಲ್ಲದರಿಂದ ವಿಶ್ರಾಂತಿ ಪಡೆಯಲು ಮಲೇಷ್ಯಾಗೆ ತೆರಳಿದ್ದಾರೆ.
Advertisement
Advertisement
ಇತ್ತೀಚೆಗೆ ಎಚ್.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯನವರ ನಡುವೆ ಮಹಾ ಯುದ್ಧವೇ ನಡೆದಿತ್ತು. ಇದಾದ ಬಳಿಕ ಇದು ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಮಧ್ಯೆ ಪ್ರಾರಂಭವಾಯಿತು. ಇಬ್ಬರು ನಾಯಕರೂ ಸಹ ಆರೋಪ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ನೇರ ಕದನಕ್ಕೆ ಇಳಿದಿದ್ದರು.
Advertisement
ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಎಚ್‍ಡಿಕೆ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿ, ಮೈತ್ರಿ ಸರ್ಕಾರದಲ್ಲಿ ಸಿಎಂ ಅಲ್ಲ, `ಎಫ್‍ಡಿಎ (ಫಸ್ಟ್ ಡಿವಿಷನ್) ಕ್ಲರ್ಕ್’ ಆಗಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ವಿರುದ್ಧ ಹರಿಹಾಯ್ದಿದ್ದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಜೆಡಿಎಸ್ಸೇ ಮೊದಲ ವೈರಿಯಾಗಿತ್ತು. ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಖುಷಿ ಆಗಿರಲಿಲ್ಲ ಎಂದು ಎಚ್‍ಡಿಕೆ ಆರೋಪಿಸಿದ್ದರು.
ಕುಮಾರಸ್ವಾಮಿಯಿಂದ ಕಾಂಗ್ರೆಸ್‍ಗೆ ತೊಂದರೆ ಅನ್ನೋದು ಸಿದ್ದರಾಮಯ್ಯ ವಾದವಾಗಿತ್ತು. ಆದರೆ ಪ್ರತಿನಿತ್ಯ ಸಿದ್ದರಾಮಯ್ಯರಿಂದ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿತ್ತು. ಸಿಎಂ ಆಗಿದ್ದಾಗ ನನ್ನ ನೈತಿಕತೆಯನ್ನು ಕುಗ್ಗಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದರು. ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯರೇ ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಲೇ ಇದ್ದರು. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗಿ ವಾಪಸ್ ಆದರೆ ಮಾತ್ರ ನಮ್ಮ ಬೆಂಬಲ ಎಂದು ಅತೃಪ್ತ ಶಾಸಕರು ಹೇಳಿದ್ದರು. ಅವರ ಮಾತಿನ ಅರ್ಥ ಏನು? ಅತೃಪ್ತರ ಶಾಸಕರನ್ನು ಸಿದ್ದರಾಮಯ್ಯ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿತ್ತು ತಾನೇ? ಆದರೆ ಸಿದ್ದರಾಮಯ್ಯ ಹಾಗೇ ಮಾಡಲಿಲ್ಲ ಎಂದು ಕಿಡಿಕಾರಿದ್ದರು.
ಒಂದು ವೇಳೆ ಯಡಿಯೂರಪ್ಪ ಸರ್ಕಾರ ನಡೆಸಲು ವಿಫಲರಾಗಿ ಸರ್ಕಾರ ಪತನವಾದರೆ ಈಗ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ತಾವು ಮತ್ತೆ ಸಿಎಂ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸಿದ್ದರಾಮಯ್ಯ ನಮ್ಮವರೇ ಆಗಿದ್ದು, ಅವರ ಬೆನ್ನಿಗೆ ನಾವು ಚೂರಿ ಇರಿದಿಲ್ಲ. ಜೆಡಿಎಸ್‍ನಲ್ಲಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಪರ್ಯಾಯವಾಗಿ ಅಹಿಂದ ಸಂಘಟನೆ ನಡೆಸಿ ಜೆಡಿಎಸ್ ಬೆಳವಣಿಗೆಗೆ ಅಡ್ಡಿ ಆದರು. ಈ ಮೂಲಕ ಜೆಡಿಎಸ್‍ಗೆ ಮೋಸ ಮಾಡಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್‍ನಿಂದ ಅವರನ್ನು ಉಚ್ಛಾಟನೆ ಮಾಡಿದೆವು ಎಂದಿದ್ದಾರೆ.
ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್‍ನವರ ಒತ್ತಡದಲ್ಲಿ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ನನ್ನ ಮೇಲೆ ಸವಾರಿ ಮಾಡಿತು. ವರ್ಗಾವಣೆಯಲ್ಲೂ ಅವರು ಹೇಳಿದ್ದನ್ನೇ ಮಾಡಬೇಕಿತ್ತು. ಡಿಸಿ ವರ್ಗಾವಣೆಯಲ್ಲೂ ನನಗೆ ಸ್ವಾತಂತ್ರ್ಯ ಇರಲಿಲ್ಲ. ವರ್ಗಾವಣೆ ನನ್ನ ವ್ಯಾಪ್ತಿಗೆ ಬಂದರೂ ನಾನು ಕಾಂಗ್ರೆಸ್‍ನವರು ಏನು ಹೇಳುತ್ತಾರೋ ಅದನ್ನೇ ಮಾಡಬೇಕಿತ್ತು, ಇವತ್ತು ಒಳ್ಳೆಯ ವ್ಯಕ್ತಿಗಳಿಗೆ ರಾಜಕೀಯ ಅಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ನನಗೆ ಗ್ಯಾರಂಟಿ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು.