ಪ್ರತಿವರ್ಷವೂ ಛಂದ ಪುಸ್ತಕ (Chanda Pushtaka) ಪ್ರಕಾಶನವು ಕಥೆಗಾರರನ್ನು ಉತ್ತೇಜಿಸುವ ಸುಲವಾಗಿ ‘ಛಂದ ಪುಸ್ತಕ ಬಹುಮಾನ’ ನೀಡುತ್ತಾ ಬಂದಿದೆ. ಮೊನ್ನೆಯಷ್ಟೇ 2022ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಘೋಷಿಸಲಾಗಿತ್ತು. ಈ ಬಾರಿಯ ಪ್ರಶಸ್ತಿಯನ್ನು ಯುವ ಬರಹಗಾರ್ತಿ ಫಾತಿಮಾ ರಲಿಯಾ (Fatima Ralia) ಪಡೆದುಕೊಂಡಿದ್ದರು. ಸತತ ಮೂರು ವರ್ಷಗಳ ಕಾಲ ಮಹಿಳೆಯರೇ ಈ ಪ್ರಶಸ್ತಿಯನ್ನು ಪಡೆದಿದ್ದರಿಂದ ಸ್ವತಃ ಸಂಸ್ಥೆಯೇ ಹೆಮ್ಮೆಯ ಮಾತುಗಳನ್ನು ಆಡಿತ್ತು. ಆದರೆ, ಹೆಮ್ಮೆಪಟ್ಟ ಸಂಗತಿಯೇ ಇದೀಗ ವಿವಾದಕ್ಕೆ ಮೂಲವಾಗಿ ಕೂತಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಫಾತಿಮಾ, ಆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
Advertisement
ಅಂದುಕೊಂಡಂತೆ ನಡೆದಿದ್ದರೆ, ಮುಂದಿನ ತಿಂಗಳು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಅಂದು ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ಬಂದ ಹಸ್ತಪ್ರತಿಯು ಪುಸ್ತಕವಾಗಿ ಬಿಡುಗಡೆ ಆಗಬೇಕಿತ್ತು. ಅಂದು ಕಾರ್ಯಕ್ರಮಕ್ಕೆ ಬರುವಂತೆ ಸ್ವತಃ ಫಾತಿಮಾ ರಲಿಯಾ ಕೂಡ ಕೆಲವರಿಗೆ ಮಸೇಜ್ ಕೂಡ ಮಾಡಿದ್ದರು. ಆದರೆ, ಇದೀಗ ಪ್ರಶಸ್ತಿಯನ್ನೇ ನಿರಾಕರಿಸಿ ಚರ್ಚೆಗೆ ಕಾರಣವಾಗಿದ್ದಾರೆ. ಛಂದ ಸಂಸ್ಥೆಗೆ ಕಳುಹಿಸಿರುವ ಇಮೇಲ್ ನಲ್ಲಿ ‘ವೈಯಕ್ತಿಕ ಕಾರಣದಿಂದಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ’ ಎಂದು ಬರೆದಿದ್ದಾರೆ. ಹಾಗಾಗಿ ಛಂದ ಪ್ರಕಾಶನದ ವಸುಧೇಂದ್ರ ಕೂಡ ಆ ಬರಹಗಾರ್ತಿಯ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ
Advertisement
Advertisement
ಪ್ರಶಸ್ತಿ ನಿರಾಕರಣೆಯ ಹಿಂದೆ ಹಲವು ಅನುಮಾನಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ. ರಲಿಯಾ ಕಳುಹಿಸಿದ್ದ ಹಸ್ತಪ್ರತಿಯಲ್ಲಿ ಮುಸ್ಲಿಂ ಮಹಿಳೆಯರ ತಲ್ಲಣಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪುಸ್ತಕವನ್ನು ಪ್ರಕಟಿಸದಂತೆ ಮತ್ತು ಬಹುಮಾನವನ್ನು ಪಡೆಯದಂತೆ ರಲಿಯಾಗೆ ಒತ್ತಡವನ್ನೂ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ವೈಯಕ್ತಿಕ ಕಾರಣ ನೀಡಿ, ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲೂ ಇವರಿಗೆ ಬಹುಮಾನ ಬಂದಿತ್ತು. ಕಾರ್ಯಕ್ರಮಕ್ಕೆ ಬರದೇ ಇದ್ದರೂ, ಆ ಪ್ರಶಸ್ತಿಯನ್ನು ಮತ್ತು ನಗದು ಬಹುಮಾನವನ್ನು ಅವರು ಸ್ವೀಕರಿಸಿದ್ದಾರೆ. ಛಂದ ಪುಸ್ತಕ ಬಹುಮಾನವನ್ನು ಮಾತ್ರ ನಿರಾಕರಿಸಿದ್ದಾರೆ. ಹಾಗಾಗಿ ಅನೇಕ ಪ್ರಶ್ನೆಗಳು ಮೂಡಿವೆ.
Advertisement
ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಛಂದ ಪುಸ್ತಕದ ವಸುಧೇಂದ್ರ (Vasudhendra), ‘ಆ ಹುಡುಗಿ ವೈಯಕ್ತಿಕ ಕಾರಣ ಎಂದು ಹೇಳಿ ಬಹುಮಾನವನ್ನು ನಿರಾಕರಿಸಿದ್ದಾರೆ. ವೈಯಕ್ತಿಕ ಕಾರಣ ಅಂತ ಹೇಳಿದ ಮೇಲೆ ನಾವೂ ಅದನ್ನು ಕೇಳಲು ಹೋಗಿಲ್ಲ. ನಿರಾಕರಣೆಯ ಹಿಂದೆ ಅವರ ಧರ್ಮದವರು ಇದ್ದಾರೆ ಎನ್ನುವುದನ್ನು ನಾನು ಒಪ್ಪಲಾರೆ. ಈ ಬಹುಮಾನ ಬಂದಾಗ ಅವರ ಧರ್ಮದವರೇ ಸಂಭ್ರಮಿಸಿದ್ದಾರೆ. ಈಗಾಗಲೇ ರಲಿಯಾ ಒಂದು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ನಿರಾಕರಣೆಗೆ ಬೇರೆ ಬಣ್ಣ ಕೊಡುವುದು ಬೇಡ’ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರು, ’ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷವೇ ಪ್ರಕಟಿಸಿದ್ದಾರೆ. ಕಳೆದ ವಾರವಷ್ಟೇ ವಿಜಯ ಕರ್ನಾಟಕ ಕಥಾ ಸ್ಪರ್ಧೆಯ ಬಹುಮಾನವನ್ನೂ ಇವರು ಪಡೆದಿದ್ದಾರೆ. ಛಂದ ಪುಸ್ತಕ ಬಹುಮಾನವಾಗಿ 40,000 ರೂಪಾಯಿ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆಯಲಿದ್ದರು.
ಈ ಬಾರಿಯ ಛಂದಾ ಪುಸ್ತಕ ಬಹುಮಾನಕ್ಕಾಗಿ 93 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ದೇಶದ ಹೆಮ್ಮೆಯ ಸಿನಿಮಾ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ (Girish Kasaravalli) ಅವರು ಮಾಡಿದ್ದರು. ರಲಿಯಾ ಬರೆದು ಪುಸ್ತಕದ ಬಗ್ಗೆ ಗಿರೀಶ್ ಟಿಪ್ಪಣಿ ಮಾಡಿ, “ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ’ ಎಂದು ಬರೆದಿದ್ದರು.