Connect with us

Latest

ಜೊತೆಯಾಗಿ ಕೆಲಸ ಮಾಡುವ ಮೋದಿ ಪ್ರಸ್ತಾಪ ತಿರಸ್ಕರಿಸಿದೆ: ಶರದ್ ಪವಾರ್

Published

on

ಮುಂಬೈ: ಭಾರತದ ಪ್ರಧಾನಿ ಮೋದಿ ಅವರು ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಾನು ಅವರ ಪ್ರಸ್ತಾಪವನ್ನು ತಿರಸ್ಕಾರ ಮಾಡಿದೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಮೋದಿ ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಮ್ಮ ವೈಯಕ್ತಿಕ ಜೀವನದಲ್ಲಿ ನಮ್ಮಿಂಬ್ಬರ ಸಂಬಂಧ ಚೆನ್ನಾಗಿದೆ. ಅದು ಹಾಗೆಯೇ ಇರುತ್ತದೆ. ಆದರೆ ನಾವು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಪವಾರ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಶರದ್ ಪವಾರ್ ಅವರು, ಮೋದಿ ಸರ್ಕಾರ ನನ್ನನ್ನು ರಾಷ್ಟ್ರಪತಿ ಮಾಡುತ್ತೆ ಎಂದು ಹೇಳಿಲ್ಲ. ಬದಲಾಗಿ ಪುತ್ರಿ, ಸಂಸದೆ ಸುಪ್ರಿಯಾ ಸುಲೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಸುಪ್ರಿಯಾ ಸುಲೆ ಅವರು ಶರದ್ ಪವಾರ್ ಅವರು ಮಗಳಾಗಿದ್ದು, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಿಂದ ಎನ್‍ಸಿಪಿ ಪಕ್ಷದಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಶರದ್ ಪವಾರ್ ಮತ್ತು ಮೋದಿ ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದು, ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ರಚನೆಯ ನಾಟಕೀಯ ಬೆಳವಣಿಗೆ ಮಧ್ಯೆಯೂ ಪ್ರಧಾನಿ ಮೋದಿ ಅವರನ್ನು ಪವಾರ್ ಭೇಟಿಯಾಗಿದ್ದರು.

ಮೋದಿ ಅವರು ಪ್ರತಿಬಾರಿಯೂ ಕೂಡ ಪವಾರ್ ಅವರನ್ನು ಹೊಗಳುತ್ತಾ ಬಂದಿದ್ದಾರೆ ಮತ್ತು ಈ ಬಾರಿಯ ಚುನಾವಣಾ ಸಮಯದಲ್ಲಿಯೂ ಕೂಡ ಶರದ್ ಪವಾರ್ ವಿರುದ್ಧ ವಾಗ್ದಾಳಿ ಮಾಡಬಾರದು ಎಂದು ಪಕ್ಷಕ್ಕೆ ಸೂಚಿಸಿದ್ದರು. ಕಳೆದ ತಿಂಗಳು ರಾಜ್ಯಸಭೆಯ 250 ನೇ ಅಧಿವೇಶನದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಮೋದಿ, ಸಂಸತ್ತಿನ ಮಾನದಂಡಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಎನ್‍ಸಿಪಿಯಿಂದ ಕಲಿಯಬೇಕು ಎಂದು ಹೇಳಿದ್ದರು.

2016 ರಲ್ಲಿ ಪವಾರ್ ಅವರ ಆಹ್ವಾನದ ಮೇರೆಗೆ ಪುಣೆಯ ವಸಂತದದ ಶುಗರ್ ಸಂಸ್ಥೆಗೆ ಬಂದಿದ್ದ ಮೋದಿ, ಶರದ್ ಪವಾರ್ ಅವರನ್ನು ಹಾಡಿಹೊಗಳಿದ್ದರು. ಶರದ್ ಪವಾರ್ ಅವರು ಸಾರ್ವಜನಿಕ ಜೀವನದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೊಗಳಿದ್ದರು. ಜೊತೆಗೆ ನನಗೆ ಅವರ ಬಗ್ಗೆ ವೈಯಕ್ತಿಕ ಗೌರವವಿದೆ. ಆ ಸಮಯದಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆ ಸಮಯದಲ್ಲಿ ಅವರು ನನಗೆ ತುಂಬಾ ಸಹಾಯ ಮಾಡಿದ್ದರು. ಇದನ್ನು ಸಾರ್ವಜನಿಕವಾಗಿ ಹೇಳಲು ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *