ಚಿಕ್ಕಮಗಳೂರು: ಲಾಕ್‍ಡೌನ್ ಘೋಷಿಸಿದ ಮೇಲೆ ಮೇಲೆ ಶೆಡ್ ಬಿಟ್ಟು ಹೊರ ಹೋಗದೆ ಯಾರಾದರೂ ಕೊಟ್ಟರೆ ಅದನ್ನೇ ಊಟ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಹೆಳವ ಸಮುದಾಯದ ಕುಟುಂಬಗಳಿಗೆ ದಾನಿಗಳಾದ ರೋನಾಲ್ಡೋ ಕುಲಾಸೋ ಸಹೋದರ ಜೋ ಕುಲಾಸೋ ಅವರು ಒಂದು ತಿಂಗಳಿಗೆ ಆಗುವಷ್ಟು ಆಹಾರದ ಸಾಮಾಗ್ರಿಗಳ ಕಿಟ್ ನೀಡಿದ್ದಾರೆ.
Advertisement
ಕಿಟ್‍ನಲ್ಲಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಗೋಧಿ ಹಿಟ್ಟು, ರವೆ, ಉಪ್ಪು, ಈರುಳ್ಳಿ, ಟೀ ಪುಡಿ, ಖಾರದಪುಡಿ, ದನಿಯಾ ಪುಡಿ, ಮೈ ಸೋಪು, ಬಟ್ಟೆ ಸೋಪು, ಅಡುಗೆ ಎಣ್ಣೆ ಒಳಗೊಂಡಿದೆ. ಸುಮಾರು 20 ಮಕ್ಕಳು ಸೇರಿದಂತೆ 14 ಕುಟುಂಬದ 54 ಜನ ಇಲ್ಲಿ ವಾಸವಿದ್ದಾರೆ. ಬೀದಿ ಮೇಲೆ ನಾನಾ ರೀತಿಯ ವ್ಯಾಪಾರ ಮಾಡಿಕೊಂಡು ಬಂದ ದುಡ್ಡಲ್ಲೇ ಊಟ ಮಾಡುತ್ತಿದ್ದ ಇವರು, ಲಾಕ್‍ಡೌನ್ ಹಿನ್ನೆಲೆ ತಿಂಗಳಿಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಯಾರಾದರೂ ತಂದು ಕೊಟ್ಟರೇ ಊಟ ಇಲ್ಲವಾದಲ್ಲಿ ಇಲ್ಲ ಎನ್ನುವ ಸ್ಥಿತಿ ಇತ್ತು.
Advertisement
ಹಲವು ದಿನಗಳ ಕಾಲ ದಿನಕ್ಕೆ ಒಂದು ಹೊತ್ತು ಊಟ ಮಾಡಿ ಬದುಕಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ಯೂ ಸುದ್ದಿ ಮಾಡಿತ್ತು. ಸುದ್ದಿ ನೋಡಿದ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸಾಮಾಗ್ರಿ ವಿತರಿಸಿದ್ದರು. ಇಂದು ಬೆಂಗಳೂರಿನಿಂದ ಬಂದ ದಾನಿಗಳು ನಿರಾಶ್ರಿತ ಹೆಳವ ಕುಟುಂಬಗಳಿಗೆ ತಿಂಗಳ ಸಾಮಾಗ್ರಿ ನೀಡಿದ್ದಾರೆ.
Advertisement
ಇದೇ ಶೆಡ್‍ನಲ್ಲಿನ ಮಹಿಳೆಯೊಬ್ಬರು ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಲಾಕ್ ಡೌನ್ ಆಗಿದ್ದರಿಂದ ಹಣವಿಲ್ಲದೆ, ಹೊಟ್ಟೆ ತುಂಬಾ ಊಟ ಸಿಗದೆ, ತಾಯಿಗೆ ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರವೂ ಸಿಗದೆ ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸಲೂ ಸಾಧ್ಯವಾಗಿರಲಿಲ್ಲ. ಇದೀಗ ದಾನಿಗಳು ರೇಷನ್ ಕೊಟ್ಟಿರುವುದರಿಂದ ನಿರಾಶ್ರಿತರ ಮೊಗದಲ್ಲಿ ಮಂದಹಾಸ ಮೂಡಿದೆ.