ಹೊಸವರ್ಷದ ಶುಭಾರಂಭದಂದು ಸಾಂಗ್ಸ್ ಪ್ರೀಮಿಯರ್ ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ ಕೊರಗಜ್ಜ (Koragajja) ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೇವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣದಲ್ಲಿರುವ ಕೊರಗಜ್ಜ ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ (Sudheer Atthavar) ಸ್ಪಷ್ಟಪಡಿಸಿದ್ದಾರೆ.
ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು… ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಹೀಗಿರುವಾಗ, ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು? ಆದಾಗ್ಯೂ ಅಶ್ಲೀಲ, ಅಸಂಬದ್ದ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್‌ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ. ನಾವು ಕಳಸದಲ್ಲಿ ಶೂಟಿಂಗ್ ಮಾಡಿದಾಗ, ದೈವ ನರ್ತಕರೇ ಲಾಂಗು-ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದರು. ಪ್ರತಿ ಬಾರಿ ‘ಕತ್ತಲೆ’ಯ ಹೆಸರನ್ನು ಹೇಳಿ ಬೆದರಿಸುತ್ತಿದ್ದರು. ಇದನ್ನೂ ಓದಿ: ರೀಲ್ಸ್ ಮಾಡಿ ಕೋಟಿ ರೂಪಾಯಿ ಬಹುಮಾನ ಗೆಲ್ಲಿ – ‘ಕೊರಗಜ್ಜ’ ಚಿತ್ರತಂಡದ ಆಫರ್‌ಗೆ ದೈವ ನರ್ತಕರ ಆಕ್ರೋಶ
ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ದೆಗೆ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ. ಕೊರಗಜ್ಜ ದೈವದ ಆಶೀರ್ವಾದದಿಂದಲೇ ಇಂತಹ ಹಲವಾರು ಅಗ್ನಿಪರೀಕ್ಷೆಗಳನ್ನು ದಾಟಿ ಈಗ ಚಿತ್ರ ರಿಲೀಸ್ ಮಾಡುವ ಹಂತಕ್ಕೆ ಬಂದಿದ್ದೇವೆ. ತುಳುನಾಡಿನ ಕೆಲಭಾಗಗಳಲ್ಲಿ ಕೊರಗಜ್ಜ ಮತ್ತು ಇನ್ನಿತರ ದೈವಗಳ ಕೋಲದ ಸಮಯದಲ್ಲಿ, ದೈವದ ಪಾತ್ರ ಮಾಡುವ ವ್ಯಕ್ತಿಯ ಬಾಯಿಯಿಂದಲೇ ಅವಾಚ್ಯ, ಅಶ್ಲೀಲ ಪದಗಳನ್ನು ಹೇಳಿಸುವುದು ವಾಡಿಕೆ ಇದೆ. ಸಭ್ಯರ, ಸಣ್ಣ ಮಕ್ಕಳ ಮುಂದೆಯೇ ಕೋಲ ಸೇವೆಯ ಸಮಯದಲ್ಲಿ ಕೇಳಲು ಹೇಸಿಗೆ ಎನಿಸುವ ಅಶ್ಲೀಲ ಪದಗಳನ್ನು ವಾಡಿಕೆ ಅಥವಾ ಪಾರಂಪರಿಕೆ ಎನ್ನುವ ಕಾರಣದಿಂದ ಹೇಳುತ್ತಾ ಬಂದಿದ್ದಾರೆ. ಅಂತಹ ಪದ್ಧತಿಗಳ ಅಶ್ಲೀಲತೆಯನ್ನು, ಸಂಸ್ಕ್ರತಿ ನೆಪದಲ್ಲಿ ಕೀಳು ಪದಗಳನ್ನು ಕೋಲಸೇವೆಯ ವೇಳೆ ದೈವದ ಹೆಸರಿನಲ್ಲಿ ಹೇಳುವುದನ್ನು ನಾಗರಿಕ ಸಮಾಜ ಒಪ್ಪಬೇಕೇ? ಇನ್ನು ಕೆಲವು ಕಡೆ ಕೊರಗಜ್ಜನನ್ನು ನೀಚ ದೈವ ಎನ್ನುವ ಹೆಸರಿನಿಂದಲೂ ಕೋಲಸೇವೆ ನೀಡುತ್ತಾರೆ. ಅಲ್ಲದೇ, ಕೊರಗಜ್ಜನನ್ನು ಕೊರಗರ ದಿಕ್ಕ ಎಂಬ ಪದಪ್ರಯೋಗದಿಂದಲೂ ಕೆಲ ದೈವ ನರ್ತಕರು ಆಚರಣೆಯ, ವಾಡಿಕೆಯ ಹೆಸರಿಲ್ಲಿ ಸಂಭೋದಿಸುತ್ತಾ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಕೋಲ ಸೇವೆಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
ಕೊರಗಜ್ಜ ನೀಚ ದೈವವೂ ಅಲ್ಲ, ಕೀಳು ಜಾತಿಯ ದೈವವೂ ಅಲ್ಲ. ಭೂತಕೋಲ ಕಟ್ಟುವ ಜನಾಂಗದವರು ಮೊದಲು ಈ ವಿಚಾರದ ಬಗ್ಗೆ ಗಮನ ಹರಿಸಬೇಕಾಗಿದೆ. ಪರಂಪರೆಯ ಹೆಸರಿನಲ್ಲಿ ದೈವಗಳಿಗೆ ಅವಹೇಳನಕಾರಿ ಅಥವಾ ಆಶ್ಲೀಲ ಪದ ಪ್ರಯೋಗಗಳ ಮುಖೇನ ಕೋಲಸೇವೆಯ ಕೈಂಕರ್ಯ ನಡೆಸುವುದು ಒಳ್ಳೆ ಸಂಸ್ಕ್ರತಿಯೇ? ಕೆಲಭಾಗಗಳ ಕೋಲದ ಸಮಯದಲ್ಲಿ ದೈವದ ವೇಷ ಹಾಕಿಕೊಂವರು ಜಾತಿಯ ಆಧಾರದಲ್ಲಿ ಗೌರವ ಕೊಡುವಂತಹ ಪರಿಪಾಠ ನಾಗರಿಕ ಸಮಾಜ ಒಪ್ಪುವಂತಹ ಆಚರಣೆಯೇ? ಇದೆಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ ಎಂಬ ಸಮಜಾಯಿಸಬಹುದು. ಸತಿ ಸಹಗಮನ ಪದ್ದತಿ, ವಿಧವೆಗೆ ತಲೆ ಬೋಳಿಸಿ ಒಳಗೆ ಕೂರಿಸುವಂತ ದರಿದ್ರ ಪದ್ದತಿಗಳೂ ನಮ್ಮ ಸಮಾಜದಲ್ಲಿ ಇತ್ತು ತಾನೆ? ಅದೆಲ್ಲವನ್ನು ಕಿತ್ತೊಗೆದಾಗಿದೆ. ಹೀಗಿರುವಾಗ, ಜಾತಿಪದ್ದತಿಯನ್ನು ಯಾಕೆ ಕೋಲದ ಸಮಯದಲ್ಲಿ ಅನುಸರಿಸಬೇಕು? ದೈವದ ಎದುರು ಎಲ್ಲಾ ಜಾತಿಯೂ ಒಂದೇ. ಮೇಲ್ಜಾತಿ, ಕೀಳು ಜಾತಿ ಎನ್ನುವುದು ದೈವದ ಪರಿಕಲ್ಪನೆಯಂತೂ ಅಲ್ಲ. ದೈವವು ನಂಬುವ ಎಲ್ಲರಿಗೂ ಸೇರಿರುವ ಶಕ್ತಿ. ನಂಬಿದವರಿಗೆ ಇಂಬುಕೊಡುವ ಶಕ್ತಿ ಎಂದಿದ್ದಾರೆ ನಿರ್ದೇಶಕ ಸುಧೀರ್ ಅತ್ತಾವರ್. ಇದನ್ನೂ ಓದಿ: ಕೊರಗಜ್ಜ ಚಿತ್ರಕ್ಕಿದೆ ಮೆಸ್ಸಿ ಹಾಡು ಕ್ರಿಯೇಟ್ ಮಾಡಿದ ತಂಡದ ಲಿಂಕ್


