ಬಳ್ಳಾರಿ: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಇದೀಗ ಭಾರತದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಇದು ಒಂದು ಕಡೆ ಆತಂಕದ ವಿಷಯವಾದರೆ, ಇದೀಗ ಚೀನಾದ ಕೊರೊನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೆ ತಟ್ಟಿದೆ.
ಬಳ್ಳಾರಿ ಮತ್ತು ಹಾವೇರಿ ಭಾಗದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತದೆ. ಊಟಕ್ಕಷ್ಟೇ ಅಲ್ಲ ಹಲವು ಕೆಂಪು ಬಣ್ಣದ ಸೌಂದರ್ಯ ವರ್ಧಕಗಳಿಗೂ ಮೆಣಸಿನಕಾಯಿ ಬಳಸಲಾಗುತ್ತದೆ. ಬಳ್ಳಾರಿಯಲ್ಲಿ ಭತ್ತದ ಜೊತೆ ಅತಿಹೆಚ್ಚು ಬೆಳೆಯೋ ಬೆಳೆ ಅಂದರೆ ಅದು ಕೆಂಪು ಮೆಣಸಿನಕಾಯಿ. ಕಳೆದ ಮೂರು ವರ್ಷದಿಂದ ಉತ್ತಮ ಇಳುವರಿ ಇಲ್ಲದೇ ಮೆಣಸಿನಕಾಯಿ ಬೆಳೆದು ನಷ್ಟ ಹೊಂದುತ್ತಿದ್ದ ಬಳ್ಳಾರಿ ರೈತರಿಗೆ ಈ ಬಾರಿ ಮೆಣಸಿನಕಾಯಿ ಬೆಳೆ ಒಂದಷ್ಟು ಕೈ ಹಿಡಿದಿತ್ತು. ಉತ್ತಮ ಮಳೆ ಬಂದ ಹಿನ್ನೆಲೆ ಇಳುವರಿ ಕೂಡ ಉತ್ತಮವಾಗಿ ಬಂದಿತ್ತು. ಆದರೆ ಇದೀಗ ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಪರಿಣಾಮ ಮೆಣಸಿನಕಾಯಿ ರಫ್ತು ಸ್ಥಗಿತಗೊಳಿಸಲಾಗಿದೆ.
Advertisement
Advertisement
ಪರಿಣಾಮ ಮೆಣಸಿನಕಾಯಿ ಬೆಲೆ ದಿಢೀರನೆ ಕುಸಿದಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಕಳೆದ 15 ದಿನಗಳ ಹಿಂದೆ ಬ್ಯಾಡಗಿ, ಬಳ್ಳಾರಿ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ 20 ರಿಂದ 25 ಸಾವಿರ ರೂ. ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್‍ಗೆ ಕೇವಲ 10 ರಿಂದ 12 ಸಾವಿರ ರೂ. ಇಳಿಮುಖವಾಗಿದೆ.
Advertisement
Advertisement
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರಗುಪ್ಪದಲ್ಲಿ ಅತಿಹೆಚ್ಚು ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತದೆ. ವಿಶೇಷವಾಗಿ ಡಬ್ಬಿ ಬ್ಯಾಡಗಿ, ಸಿಜೆಂಟಾ ಥಳಿಯ ಮೆಣಸಿನಕಾಯಿಯನ್ನು ಅತಿಹೆಚ್ಚು ಇಲ್ಲಿ ಬೆಳೆಯಲಾಗುತ್ತದೆ. ಆದರೆ ಬೆಲೆ ದಿಢೀರ್ ಕುಸಿತದಿಂದ ಬಳ್ಳಾರಿಯ 20 ಸಾವಿರಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಆದರೆ ಎಪಿಎಂಸಿ ಅಧಿಕಾರಿಗಳು ರಫ್ತು ನಿಷೇಧದ ಜೊತೆ ಈ ಬಾರಿ ಇಳುವರಿ ಹೆಚ್ಚು ಬಂದಿರೋದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಿದ್ದಾರೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎನ್ನುವ ಮಾತಿನಂತೆ ಇದೀಗ ಚೀನಾದಲ್ಲಿನ ವೈರಸ್ ಬಳ್ಳಾರಿ ರೈತರ ಮೇಲೆ ಪರಿಣಾಮ ಬೀರಿದೆ. ಅದೇನೆ ಇರಲಿ ಅನ್ನದಾತ ನಷ್ಟ ಹೊಂದಲು ಕಾಲಕಾಲಕ್ಕೆ ಒಂದೊಂದು ಸಮಸ್ಯೆ ಉದ್ಭವಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಈ ಬಗ್ಗೆ ಸರ್ಕಾರ ಗಂಭೀರವಾಗಿ ರಫ್ತಾಗುವ ಮೆಣಸಿನಕಾಯಿಯನ್ನು ಗೋದಾಮಿನಲ್ಲಿ ಸ್ಟಾಕ್ ಇಡಲು ಅನುಕೂಲ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ರೈತರು ಮತ್ತಷ್ಟು ನಷ್ಟ ಅನುಭವಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.