– ಪಾಕ್ ತಂಡದ ವಿರುದ್ಧ ದೇಶದ್ರೋಹದ ಕೇಸ್!
ಫ್ಲೋರಿಡಾ: ಅಮೆರಿಕ ಮತ್ತು ಐರ್ಲೆಂಡ್ ನಡುವೆ ನಡೆಯಲಿರುವ ಇಂದಿನ (ಶುಕ್ರವಾರ) ಟಿ20 ವಿಶ್ವಕಪ್ (T20 World Cup) ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡ (Pakistan Team) ಮನೆಗೆ ತೆರಳುವುವುದು ಖಚಿತವಾಗಿದೆ.
2024ರ ಟಿ20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯ ಶುಕ್ರವಾರ ಅಮೆರಿಕದ (USA) ಲಾಡರ್ಹಿಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯುಎಸ್‌ಎ-ಐರ್ಲೆಂಡ್ (USA vs Ireland) ತಂಡಗಳು ಕಾದಾಟ ನಡೆಸಲಿವೆ. ಸದ್ಯಕ್ಕೆ ಫ್ಲೋರಿಡಾ ನಗರದಲ್ಲಿ 89% ಸಾಂದ್ರತೆಯೊಂದಿಗೆ 23% ಮಳೆಯಾಗುವ ಸಾಧ್ಯತೆಯಿದ್ದು. 8 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಯುಎಸ್ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೇ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: 250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?
ಪಾಕ್ ಏಕೆ ಮನೆಗೆ?
ಟಿ20 ವಿಶ್ವಕಪ್‌ನಲ್ಲಿ A ಗುಂಪಿನಲ್ಲಿರುವ 5 ತಂಡಗಳ ಪೈಕಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಂ ಇಂಡಿಯಾ 6 ಅಂಕಗಳೊಂದಿಗೆ ಸೂಪರ್-8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. A ಗುಂಪಿನಲ್ಲಿ ಸೂಪರ್ 8 ಪ್ರವೇಶಿಸಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶ ಇದೆ. ಯುಎಸ್ ತಂಡ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಪಾಕ್ ತಂಡ ಯುಎಸ್‌ಎಗಿಂತಲೂ ಉತ್ತಮ ನೆಟ್ ರನ್‌ರೇಟ್ ಹೊಂದಿದ್ದರೂ 2 ಪಂದ್ಯಗಳಲ್ಲಿ ಸೋತಿರುವುದರಿಂದ 2 ಅಂಕ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಐರ್ಲೆಂಡ್ ವಿರುದ್ಧ ಯುಎಸ್ ಸೋತು, ಪಾಕ್ ಐರ್ಲೆಂಡ್ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆದ್ದರೆ, ಸೂಪರ್-8ಗೆ ಅರ್ಹತೆ ಪಡೆದುಕೊಳ್ಳಲಿದೆ.
ಒಂದು ವೇಳೆ ಐರ್ಲೆಂಡ್ ವಿರುದ್ಧದ ಪಂದ್ಯ ಮಳೆಗೆ ಬಲಿಯಾದರೆ ಆಗ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದುಕೊಳ್ಳಲಿದೆ. ಯುಎಸ್ 5 ಅಂಕದೊಂದಿಗೆ ಸೂಪರ್-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಪಾಕ್ ತಂಡ ಐರ್ಲೆಂಡ್ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!
ಪಾಕ್ ತಂಡದ ವಿರುದ್ಧ ದೇಶದ್ರೋಹದ ಕೇಸ್:
ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶ ದ್ರೋಹ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್ ಮಾರಿ ಕ್ರಿಕೆಟ್ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ