ಬೆಂಗಳೂರು: ಬಿಡಿಎ, ಬೆಂಗಳೂರು ಜಲಮಂಡಳಿ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಡಿ.20ರಿಂದ 22ರವರೆಗೆ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಬಿಗಿ ಕ್ರಮಗಳನ್ನು ಕೈಗೊಂಡಿದೆ.
ವಿವಿಧ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದ ಒಟ್ಟು 24,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಷ್ಟೂ ಮಂದಿಗೆ ಮೂರು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದರು.ಇದನ್ನೂ ಓದಿ: ಜಿಬಿಎ 5 ಪಾಲಿಕೆ ಚುನಾವಣೆ – ಸರ್ಕಾರದಿಂದ ಮೀಸಲಾತಿ ಮಾರ್ಗಸೂಚಿ ಪ್ರಕಟ
ಅತ್ಯಂತ ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಜೊತೆಗೆ ಜಾಮರ್ ಕೂಡ ಹಾಕಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಇದ್ದು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಡಿ.20ರಂದು ಬೆಂಗಳೂರಿನ ಏಳು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 3,486 ಮಂದಿ ಬರೆಯಲಿದ್ದಾರೆ. ಬೆಂಗಳೂರು, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳ 51 ಕೇಂದ್ರಗಳಲ್ಲಿ ಡಿ.21ರಂದು ನಡೆಯುವ ಪರೀಕ್ಷೆಯನ್ನು 21,198 ಮಂದಿ ಹಾಗೂ ಡಿ.22ರಂದು ಬೆಂಗಳೂರಿನಲ್ಲಿ ಮಾತ್ರ ನಡೆಯುವ ಪರೀಕ್ಷೆಯಲ್ಲಿ 1,166 ಮಂದಿ ಬರೆಯಲಿದ್ದಾರೆ ಎಂದು ವಿವರಿಸಿದರು. ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ತಮಗೆ ಅನ್ವಯವಾಗುವ ದಿನ ನಿಗದಿತ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು ಎಂದು ವಿವರಿಸಿದರು.
ಎಲ್ಲರಿಗೂ ಕನ್ನಡ ಪರೀಕ್ಷೆ:
ಕಲ್ಯಾಣ ಕರ್ನಾಟಕ ಸೇರಿದಂತೆ ಇತರ ಎಲ್ಲರಿಗೂ ಡಿ.28ರಂದು ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ ಎಂದರು.ಇದನ್ನೂ ಓದಿ: ಪಿಜಿ/ಯುಜಿ ಆಯುಷ್ ಫಲಿತಾಂಶ ಪ್ರಕಟ: ಕೆಇಎ

