ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ (Malur Assembly Election) ಮರು ಮತ ಎಣಿಕೆ (Vote Recount) ಕಾರ್ಯ ಭಾರಿ ಬಿಗಿ ಬಂದೋಬಸ್ತಿನಲ್ಲಿ ಮುಂದುವರಿದಿದೆ. ನಾಲ್ಕು ಸುತ್ತುಗಳ ಅಂಚೆ ಮತ ಎಣಿಕೆ ಸೇರಿದಂತೆ ಈವರೆಗೆ 17 ಸುತ್ತಗಳ ಮತ ಎಣಿಕೆ ಮುಗಿದಿದೆ. ಇನ್ನೂ 1 ಸುತ್ತಿನ ಮತ ಎಣಿಕೆ ಬಾಕಿ ಇದ್ದು, ರಾತ್ರಿ 9 ಗಂಟೆಗೆ ಮುಗಿಯುವ ಸಾಧ್ಯತೆ ಇದೆ.
ಕೋಲಾರ (Kolar) ನಗರ ಹೊರವಲಯದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಆರಂಭವಾಯಿತು. ನಾಲ್ಕು ಟೇಬಲ್‌ಗಳಲ್ಲಿ ಅಂಚೆ ಮತ ಎಣಿಕೆ ಹಾಗೂ 14 ಟೇಬಲ್‌ಗಳಲ್ಲಿ ಇವಿಎಂ ಮತಗಳ ಎಣಿಕೆ ನಡೆಯುತ್ತಿದೆ. ಅಭ್ಯರ್ಥಿಗಳ ಏಜೆಂಟರು ಇದ್ದಾರೆ. ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ. ಹಾಲಿ ಶಾಸಕ ಕೆ.ವೈ.ನಂಜೇಗೌಡ, ಪ್ರತಿಸ್ಪರ್ಧಿ ಕೆ.ಎಸ್.ಮಂಜುನಾಥ ಗೌಡ, ಹೂಡಿ ವಿಜಯಕುಮಾರ್ ಎಣಿಕೆ ಕೇಂದ್ರದಲ್ಲಿ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಮಧ್ಯೆ ತೀವ್ರ ಹಣಾಹಣಿ ನಡೆದಿದೆ.
ಪೂರ್ಣವಾಗಿ ಇವಿಎಂ ಮತಗಳ ಎಣಿಕೆ ನಡೆದ ಬಳಿಕ ಪ್ರತಿಸ್ಪರ್ಧಿಗಳು ವಿವಿ ಪ್ಯಾಟ್ ತಾಳೆ ಮಾಡಲು ಮನವಿ ಸಲ್ಲಿಸಲಿದ್ದಾರೆ. ಹೀಗಾಗಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಕೆಲವು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ, ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಪ್ರಕಟಿಸುವಂತಿಲ್ಲ.
ಮರು ಮತ ಎಣಿಕೆಗೆ ಹಿಂದೆಂದೂ ಕಾಣದಷ್ಟು ಭದ್ರತೆ ಒದಗಿಸಲಾಗಿತ್ತು. ಎಣಿಕೆ ಕೇಂದ್ರ ತೋಟಗಾರಿಕೆ ಮಹಾವಿದ್ಯಾಲಯದಿಂದ 1 ಕಿ.ಮೀ ವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಪೊಲೀಸರು ಬೆಂಗಳೂರು-ತಿರುಪತಿ ಹೆದ್ದಾರಿಯ ಸರ್ವಿಸ್ ರಸ್ತೆಯ ಉದ್ದಕ್ಕೂ ಬ್ಯಾರಿಕೇಡ್ ಹಾಕಿ ವಾಹನ ತಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮತ ಎಣಿಕೆ ಆರಂಭವಾದಾಗ ಟಮಕದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನಸಾಗರವೇ ಸೇರಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರು ಬ್ಯಾರಿಕೇಡ್ ಅಡ್ಡಹಾಕಿ ತಡೆದು ಚದುರಿಸಲು ಪ್ರಯತ್ನಿಸಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಎಚ್ಚರಿಸಿದರು.

