ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

Public TV
1 Min Read
Summer Pots 1

ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದ್ದು, ದಾಖಲೆ ಬರೆಯುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದು, ಮಡಿಕೆ, ಹಣ್ಣುಗಳು ಸೇರಿದಂತೆ ಇನ್ನಿತರ ವ್ಯಾಪಾರದ ಬೇಡಿಕೆ ಹೆಚ್ಚಾಗುತ್ತಿದೆ.

Summer Pots 2

ಹೌದು, ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಮಾರ್ಚ್ ತಿಂಗಳಲ್ಲೇ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಪ್ರತಿದಿನ ಸರಾಸರಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವುದು ಸಾಮಾನ್ಯವಾಗಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ – ಎಎಸ್‌ಐ ಸೇರಿ ನಾಲ್ವರು ಅರೆಸ್ಟ್‌

ಜಿಲ್ಲೆಯಲ್ಲಿ ಮಧ್ಯಾಹ್ನವಾದರೆ ಸಾಕು ಹೊರಗೆ ಓಡಾಡುತ್ತಿರುವ ಜನರು ಕಣ್ಣಿಗೆ ಬೀಳುವುದೇ ಇಲ್ಲ. ಆರಾಮಾಗಿ ಮನೆಯಲ್ಲಿ ಕುಳಿತುಕೊಳ್ಳುವುದೇ ಒಳಿತು ಎನ್ನುವಂತಾಗಿದೆ. ಬೇಸಿಗೆಯ ಬಿಸಿಲಿಗೆ ಜನರು ಕಂಗಾಲಾಗಿದ್ದು, ಇತ್ತ ಸೀಸನ್ ವ್ಯಾಪಾರಗಳು ಜೋರಾಗಿ ನಡೆಯುತ್ತಿವೆ. ಹಿಂದೆಂದೂ ಕಾಣದ ಪೈಪೋಟಿ ವ್ಯಾಪಾರಿಗಳಲ್ಲಿ ಕಾಣುತ್ತಿದೆ.

Watermelon

ರಾಜಸ್ಥಾನದ ಮಣ್ಣಿನ ಗಡಿಗೆ, ಮಡಿಕೆ, ಬಾಟಲ್‌ಗಳ ಮಾರಾಟಕ್ಕೆ ನಗರದಲ್ಲಿ ತೀವ್ರ ಪೈಪೋಟಿಯಿದೆ. ಯಾವುದೇ ರಸ್ತೆಯಲ್ಲಿ ಹೋದರೂ ಕೂಡ ಮಡಿಕೆಗಳು ಕಾಣಸಿಗುತ್ತಿವೆ. 50-800 ರೂ.ವರೆಗೆ ಮಣ್ಣಿನ ಮಡಿಕೆ, ಬಾಟಲ್‌ಗಳು ಮಾರಾಟವಾಗುತ್ತಿದೆ. ಆದರೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದಕ್ಕೆ ಕೆಲವರು ದೂರದಿಂದ ತಂದ ವಸ್ತುಗಳು ಮಾರಾಟವಾಗದೇ ನಷ್ಟವನ್ನೂ ಅನುಭವಿಸುತ್ತಿದ್ದಾರೆ.

Summer Pots

ಮಣ್ಣಿನ ಮಡಿಕೆ ವ್ಯಾಪಾರದ ಜೊತೆ ಕಲ್ಲಂಗಡಿ, ಕರಬೂಜ ಸೇರಿ ವಿವಿಧ ಹಣ್ಣುಗಳು, ತೆಂಗಿನಕಾಯಿ, ಎಳನೀರು ವ್ಯಾಪಾರದಲ್ಲೂ ಪೈಪೋಟಿ ಜೋರಾಗಿದೆ. ಮಂಡ್ಯ, ಮದ್ದೂರು, ಮೈಸೂರಿನಿಂದ ಬರುವ ಎಳೆನೀರಿನ ಬೆಲೆ ದುಬಾರಿಯಾಗಿದ್ದು, ಒಂದಕ್ಕೆ 60 ರೂ.ಯಂತೆ ಮಾರಾಟವಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಬೇಸಿಗೆಯ ಬಿಸಿಲಿನ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುತ್ತಿದೆ.

Coconut water

ಒಟ್ಟಿನಲ್ಲಿ ಬಿಸಿಲನಾಡು ರಾಯಚೂರಿನಲ್ಲಿ ಈ ಬಾರಿ ಬೇಸಿಗೆ ಆರಂಭದಿಂದಲೇ ರಣಬಿಸಿಲು ಅಬ್ಬರಿಸುತ್ತಿದೆ. ಬಿಸಿಲನ್ನು ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದರೂ, ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.ಇದನ್ನೂ ಓದಿ: ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

 

Share This Article