ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಯನ್ ಇಂಟರ್ ನ್ಯಾಷನಲ್ ಶಾಲೆಯ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ಕೊಲೆ ಮಾಡಿರುವುದಾಗಿ ಸಿಬಿಐ ಹೇಳಿದೆ.
ಪ್ರದ್ಯುಮನ್‍ನನ್ನು ಕೊಲೆ ಮಾಡಿದ ದೃಶ್ಯದ ಮರುಸೃಷ್ಟಿಗಾಗಿ 16 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಇಂದು ಸಿಬಿಐ ತಂಡ ಚಾಕುವಿನ ಅಂಗಡಿಗಳಿಗೆ ಕರೆದುಕೊಂಡು ಹೋಗಿದೆ. ಜೊತೆಗೆ ಇಂದು ಆತನನ್ನು ಶಾಲೆಗೂ ಕರೆದುಕೊಂಡು ಹೋಗಲಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಆರೋಪಿ ವಿದ್ಯಾರ್ಥಿ ಚಾಕುವನ್ನ ಯಾವ ಅಂಗಡಿಯಲ್ಲಿ ಖರೀದಿಸಿದ್ದ ಎಂಬುದನ್ನ ತಿಳಿಯಲು ಆಯ್ದ ಕೆಲವು ಅಂಗಡಿಗಳಿಗೆ ಆತನನ್ನು ಕರೆದುಕೊಂಡು ಹೋಗಲಾಗಿದೆ. ಶಾಲೆಗೂ ಆರೋಪಿಯನ್ನ ಕರೆದುಕೊಂಡು ಹೋಗಿ ಸೆಪ್ಟೆಂಬರ್ 8ರಂದು ಪ್ರದ್ಯುಮನ್‍ನನ್ನು ಕೊಲೆ ಮಾಡಿದ ರೀತಿಯನ್ನು ವಿವರಿಸುವಂತೆ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಸೆಪ್ಟೆಂಬರ್ 8 ರಂದು ಇಲ್ಲಿನ ಆರ್ಯನ್ ಇಂಟರ್ ನ್ಯಾಷನಲ್ ಶಾಲೆಯ ಟಾಯ್ಲೆಟ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಬಯಲಾಗಿದ್ದು, ಪರೀಕ್ಷೆ ಮುಂದೂಡಿಕೆಯಾಗಲಿ ಅಂತ 11ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಸಿಬಿಐ ಹೇಳಿದೆ.
Advertisement
11 ನೇ ತರಗತಿ ವಿದ್ಯಾರ್ಥಿಯನ್ನು ಸಿಬಿಐ ಕಸ್ಟಡಿಯಲ್ಲಿ ಇಟ್ಟುಕೊಂಡು ವಿಚಾರಣೆ ಮಾಡುತ್ತಿದ್ದು, ಆತ 6 ಗಂಟೆ ಸಮಯ ಆದ ಬಳಿಕ ಮಾತನಾಡಿದ್ದಾನೆ. ಹತ್ಯೆಗೆ ಬಳಸಲಾಗಿದ್ದ ಚಾಕವನ್ನು ಯಾವ ಅಂಗಡಿಯಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದ್ದಾನೆ. ಇನ್ನೂ ಎರಡು ದಿನಗಳಲ್ಲಿ ಆತನನ್ನು ಶಾಲೆಗೆ ಕರೆದುಕೊಂಡು ಹೋಗಿ ಸೆ.8 ರಂದು ಪ್ರದ್ಯುಮನ್‍ನನ್ನು ತರಗತಿಯ ಪಕ್ಕದ ಶಾಲೆಯ ಶೌಚಾಲಯದಲ್ಲಿ ಹೇಗೆ ಹತ್ಯೆ ಮಾಡಿದ ಎಂದು ಮರುಸೃಷ್ಟಿ ಮಾಡಲಾಗುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಪರೀಕ್ಷೆ ಮುಂದೂಡಿಕೆಯಾಗಲು ಕೊಲೆ?: ತನಿಖಾಧಿಕಾರಿಗಳು ಜುವೆನೈಲ್ ಕೋರ್ಟ್‍ಗೆ ಆರೋಪಿಯನ್ನು ಹಾಜರುಪಡಿಸಿದ್ದು, ಅಲ್ಲಿ ಆರೋಪಿ ತಂದೆ, ಸಾಕ್ಷಿಗಳು ಮತ್ತು ಸಮಾಜ ಕಲ್ಯಾಣ ಬೋರ್ಡ್‍ನ ಸದಸ್ಯರ ಮುಂದೆ ತಾನು ಮಾಡಿರುವ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಈ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಸಿಬಿಐ ಇನ್ನೂ ಪುರಾವೆಗಳನ್ನು ಪತ್ತೆ ಹಚ್ಚುತ್ತಿವೆ.
ಕಂಡಕ್ಟರ್ ಬಂಧನ: ಪ್ರದ್ಯುಮನ್ ತಂದೆ ಬಾಲಕನನ್ನು ಶಾಲೆಗೆ ಬಿಟ್ಟು ಹೋದ 15 ನಿಮಿಷಗಳಲ್ಲಿ ಹತ್ಯೆ ಮಾಡಲಾಗಿತ್ತು. 7 ಗಂಟೆಯ ನಂತರ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದರು. ಬಸ್ ಡ್ರೈವರ್‍ನ ಚಾಕುವನ್ನ ಕ್ಲೀನ್ ಮಾಡಲು ಟಾಯ್ಲೆಟ್ ಗೆ ಹೋಗಿದ್ದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕಂಡಕ್ಟರ್ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದರು.
ಬಸ್‍ನಲ್ಲಿ ಚಾಕು ಇರ್ಲಿಲ್ಲ: ಆದ್ರೆ ಎರಡು ದಿನಗಳ ನಂತರ ಬಸ್‍ನಲ್ಲಿ ಯಾವುದೇ ಚಾಕು ಇರಲಿಲ್ಲ ಎಂದು ಡ್ರೈವರ್ ತಿಳಿಸಿದ್ದನು. ಪೊಲೀಸರು 7 ದಿನಗಳ ಚಾರ್ಜ್‍ಶೀಟ್ ಫೈಲ್ ಮಾಡುವುದಾಗಿ ಹೇಳಿದ್ದರೂ ಯಾವುದೇ ಚಾರ್ಜ್‍ಶೀಟ್ ಸಲ್ಲಿಸಿರಲಿಲ್ಲ. ನಂತರ ಸಿಬಿಐ ಸೆ.29 ರಂದು ಈ ಕೇಸ್ ಕೈಗೆತ್ತಿಕೊಂಡಿತ್ತು
ಸಿಬಿಐ ವಿಚಾರಣೆ ನಡೆಸಿದಾಗ ಬಸ್ ಕಂಡಕ್ಟರ್ ಮತ್ತೆ ಮತ್ತೆ ನಾನು ಈ ಕೊಲೆ ಮಾಡಿಲ್ಲ ಎಂದು ಹೇಳಿದ್ದನು. ಬಾಲಕನ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗಲೂ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವರದಿ ಬಂದಿತ್ತು. ಬಾಲಕನ ಶವವನ್ನು ಮೊದಲು ನೋಡಿದ್ದ ಶಾಲೆಯ ತೋಟದ ಮಾಲಿ, ಅಶೋಕ್ ಕುಮಾರ್ ಟಾಯ್ಲೆಟ್ ಒಳಗೆ ಹೋಗೋದನ್ನ ನೋಡಿದ್ದೆ. ಆದ್ರೆ ಅವನ ಕೈಯಲ್ಲಿ ಚಾಕು ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಇಬ್ಬರು ವಿದ್ಯಾರ್ಥಿಗಳು ಬಂದು ಪ್ರದ್ಯುಮನ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆಂದು ಹೇಳಿದ್ದಾಗಿ ಅವರು ತಿಳಿಸಿದ್ದರು. ನಂತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ 11ನೇ ತರಗತಿಯ ವಿದ್ಯಾರ್ಥಿ ಬಳಿ ಚಾಕು ಇದ್ದಿದ್ದನ್ನು ನೋಡಿದ್ದೆವು ಎಂದು ಹೇಳಿದ್ದರು.
ವಿದ್ಯಾರ್ಥಿಯ ಬಗ್ಗೆ ವಿಚಾರಣೆ ನಡೆಸಿದಾಗ ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಮನೋವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಆತನಿಗೆ ತುಂಬಾ ಕೋಪ. ಶಾಲೆಯಲ್ಲಿ ರೌಡಿ ಎಂದು ಕರೆಯುತ್ತಿದ್ದರು ಎಂದು ತಿಳಿದುಬಂದಿದ್ದಾಗಿ ವರದಿಯಾಗಿದೆ.
ಕೊಲೆಗೂ ಮುನ್ನ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಿ ಪರೀಕ್ಷೆ ಮುಂದೂಡಿಕೆಯಾಗಬೇಕು. ಆಗ ನಾವು ಓದುವ ಚಿಂತೆಯೇ ಇರುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಿಬಿಐ ಹೇಳಿದೆ. ಈತನ ಶಾಲೆಯ ರೆಕಾರ್ಡ್ ನೋಡಿದ್ರೆ ಈತ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.