ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ (Skill Development Department) ಎಲ್ಲಾ ಸಾಮಾನ್ಯ ವರ್ಗಾವಣೆಗಳನ್ನು ಇನ್ನು ಮುಂದೆ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಘೋಷಿಸಿದರು.
ವಿಕಾಸಸೌಧದಲ್ಲಿ ಗುರುವಾರ ಸಂಜೆ ನಡೆದ ಇಲಾಖಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ, ಸಚಿವರು, ಹೊಸ ವ್ಯವಸ್ಥೆಗೆ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕ್ರೂಪ್ ಕೌರ್ ಅವರಿಗೆ ಸೂಚಿಸಿದರು.
ಸಚಿವಾಲಯದ ಅಡಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ (ಡಿಇಟಿ) ಅತಿ ಹೆಚ್ಚು ಉದ್ಯೋಗಸ್ಥರನ್ನು ಹೊಂದಿದೆ. ಪ್ರಭಾವ ಮತ್ತು ಶಿಫಾರಸುಗಳ ಮೂಲಕ ಆಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಗಳಿಗೆ ಕೊನೆ ಹಾಡಬೇಕಾಗಿದೆ. ಎಲ್ಲಾ ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕ ಮಾಡಬೇಕು. ಇದು ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು. ಇದನ್ನೂ ಓದಿ: ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳಿಗೆ ರಾಜ್ಯ ಸರ್ಕಾರವು ಜೂನ್ 16 ಗಡುವು ನಿಗದಿಪಡಿಸಿದೆ ಎಂದು ಸಚಿವರು ತಿಳಿಸಿದರು. ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಹಿರಿಯ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಳಂಬವಿಲ್ಲದೆ ವರ್ಗಾಯಿಸಲು ಇದೇ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ
ಯುವಜನರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸಾಧಿಸಲು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC), ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್ (NLM) ನಂತಹ ಸಂಸ್ಥೆಗಳಿಗೆ ಯುವನಿಧಿ ಯೋಜನೆ ಮತ್ತು ಉದ್ಯೋಗ ಮೇಳಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಲು ಸಚಿವರು ನಿರ್ದೇಶಿಸಿದರು.
ಪದವೀಧರರಾಗಿದ್ದರೂ, ಉದ್ಯೋಗ ಮೇಳಗಳಲ್ಲಿ ಅನೇಕ ಅಭ್ಯರ್ಥಿಗಳು ತಾಂತ್ರಿಕ ಕೌಶಲ್ಯಗಳ ಕೊರತೆಯಿಂದಾಗಿ ತಿರಸ್ಕರಿಸಲ್ಪಡುತ್ತಾರೆ. ಈ ಅಂತರವನ್ನು ತರಬೇತಿಯೊಂದಿಗೆ ಕಡಿಮೆಗೊಳಿಸಲು ನಾವು ಯುವನಿಧಿ ಆಕಾಂಕ್ಷಿಗಳು ಮತ್ತು ಉದ್ಯೋಗ ಮೇಳ ಅರ್ಜಿದಾರರ ವಿಶಾಲ ಡೇಟಾಬೇಸ್ ಅನ್ನು ಬಳಸಬೇಕು ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.