– ಉಚ್ಛಾಟನೆ ವಾಪಸ್‌ಗೆ ಹೈಕಮಾಂಡ್‌ಗೆ ಮನವಿ
ಬೆಂಗಳೂರು: ಬಿಜೆಪಿ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಭಿನ್ನರಿಗೆ ಬರಸಿಡಿಲಂತೆ ಬಂದೆರಗಿದೆ. ಈ ಬೆನ್ನಲ್ಲೇ ಭಿನ್ನರು ತಮ್ಮ ತಂಡದ ನಾಯಕ ಯತ್ನಾಳ್ ರಕ್ಷಣೆಗೆ ಮುಂದಾಗಿದ್ದಾರೆ. ಇಂದು ಭಿನ್ನಮತೀಯ ಮುಖಂಡರು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಸಭೆ ನಡೆಸಿದರು. ಉಚ್ಚಾಟನೆ ವಾಪಸ್ ಪಡೆಯುವ ಸಂಬಂಧ ಹೈಕಮಾಂಡ್‌ಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ.
ಬಿಜೆಪಿ ಭಿನ್ನರ ಪಡೆಯಲ್ಲಿ ಈಗ ಕಾರ್ಮೋಡದ ವಾತಾವರಣ. ಯತ್ನಾಳ್ ಉಚ್ಚಾಟನೆ, ಬಿಪಿ ಹರೀಶ್‌ಗೆ ಶೋಕಾಸ್ ನೋಟಿಸ್ ನಂತರ ಮುಂದೇನು ಅನ್ನೋದೇ ಅವರ ಮುಂದಿರುವ ದೊಡ್ಡ ಪ್ರಶ್ನೆ. ಈ ನಿಟ್ಟಿನಲ್ಲಿ ಚರ್ಚಿಸಲು ಇಂದು ಯತ್ನಾಳ್ ತಂಡ ಸದಸ್ಯರು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಸಭೆ ನಡೆಸಿದರು. ತಮ್ಮ ಮುಂದಿನ ಹೋರಾಟ ಹಾಗೂ ಯತ್ನಾಳ್ ಉಚ್ಚಾಟನೆ ನಿರ್ಧಾರ ಮರುಪರಿಶೀಲಿಸಲು ಹೈಕಮಾಂಡ್‌ಗೆ ಮನವಿ ಮಾಡಿಕೊಳ್ಳುವ ಸಂಬಂಧ ಸಮಾಲೋಚನೆ ನಡೆಸಿದರು.
ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರ ಬೆಂಗಳೂರು ನಿವಾಸದಲ್ಲಿ ಭಿನ್ನರ ಸಭೆ ನಡೆಯಿತು. ಈ ಸಭೆಗೆ ಅಂತಾನೇ ಉಚ್ಚಾಟನೆ ಬಳಿಕ ತಮ್ಮ ಚಿಂಚೋಳಿ ಗೆಸ್ಟ್ ಹೌಸ್‌ನಲ್ಲಿದ್ದ ಶಾಸಕ ಯತ್ನಾಳ್ ಸಹ ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು. ಶೋಕಾಸ್ ನೋಟಿಸ್ ಪಡೆದ ಬಿಪಿ ಹರೀಶ್ ಸಹ ಇದ್ದರು. ಇನ್ನುಳಿದಂತೆ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಎನ್‌ಆರ್ ಸಂತೋಷ್, ಮಾಜಿ ಸಂಸದ ಬಿವಿ ನಾಯಕ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯವಾಗಿ ಮೂರು ಹಂತಗಳಲ್ಲಿ ಯತ್ನಾಳ್ ಬಚಾವೋ ಆಂದೋಲನ ಜಾರಿಗೆ ಪ್ಲ್ಯಾನ್ ಮಾಡಲಾಗಿದೆ. ಉಚ್ಚಾಟನೆ ವಿಚಾರ ಮರುಪರಿಶೀಲನೆ ನಡೆಸುವಂತೆ ಹೈಕಮಾಂಡ್‌ಗೆ ಖುದ್ದು ಯತ್ನಾಳ್ ಮೂಲಕ ಪತ್ರ ಬರೆಸುವುದು, ಪಕ್ಷದ ನಿಷ್ಠ ನಾಯಕರು, ವರಿಷ್ಠರಿಗೆ ಆಪ್ತರಾಗಿರುವ ಹೊರ ರಾಜ್ಯದ ಬಿಜೆಪಿ ನಾಯಕರ ಮೂಲಕ ಒತ್ತಡ ತರುವುದು, ಇವೆರಡೂ ಕೈಗೂಡದಿದ್ದರೆ ದೆಹಲಿಗೆ ಭಿನ್ನರ ನಿಯೋಗ ಹೋಗುವ ಬಗ್ಗೆ ಚರ್ಚಿಸಲಾಗಿದೆ. ಇನ್ನು ಹೈಕಮಾಂಡ್ ಉಚ್ಚಾಟನೆ ವಾಪಸ್ ಪಡೆಯದಿದ್ದಲ್ಲಿ ಸಾಮೂಹಿಕ ರಾಜೀನಾಮೆಗೆ ಮುಂದಾಗುವ ಬಗ್ಗೆಯೂ ಆಲೋಚನೆ ಇದೆ ಎನ್ನಲಾಗಿದೆ.
ಇನ್ನೊಂದು ಕಡೆ ಉಚ್ಚಾಟಿತ ಶಾಸಕನ ಜತೆಗೂಡಿ ಸಭೆ ನಡೆಸುವ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಆಗಿದೆ ಎಂಬ ಚರ್ಚೆಯೂ ನಡೀತಿದೆ. ಅದೇನೇ ಇದ್ರೂ ಬಿಜೆಪಿ ಭಿನ್ನರು ಯತ್ನಾಳ್ ಸೇವ್ ಆಪರೇಷನ್‌ಗೆ ಮುಂದಾಗಿದ್ದಾರೆ. ಹೈಕಮಾಂಡ್ ನಡೆ ಏನು ಅನ್ನೋದು ಸದ್ಯಕ್ಕೆ ಕುತೂಹಲ.