ಬೆಂಗಳೂರು: ಕೈ ನಾಯಕರ ಜೊತೆ ಮುನಿಸಿಕೊಂಡಿರುವ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಕೆಲ ದಿನಗಳಿಂದ ಪ್ರಕಟಗೊಳ್ಳುತ್ತಿದ್ದ ಸುದ್ದಿಗೆ ಈಗ ಅವರೇ ಫುಲ್ ಸ್ಟಾಪ್ ಹಾಕಿದ್ದಾರೆ.
ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಅಂಬರೀಶ್ ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಮುಂದಾಗಿದ್ದರು. ಪಕ್ಷದ ನಾಯಕರ ಸೂಚನೆ ಮೇರೆಗೆ ಕೇಂದ್ರದ ಮಾಜಿ ಸಚಿವ ಹಾಗೂ ನಟ ಕೃಷ್ಣಂ ರಾಜು ಹೈದರಾಬಾದ್ ನಲ್ಲಿ ಅಂಬರೀಶ್ ಅವರನ್ನು ಭೇಟಿಯಾಗಿ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದರು.
Advertisement
ಆದರೆ ಈ ಆಹ್ವಾನವನ್ನು ಅಂಬರೀಶ್ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಸೇರಲು ಕೂಡ ನಿರಾಕರಿಸಿದ್ದು, ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಆದ್ದರಿಂದ ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕೇ? ಬೇಡವೇ ಅನ್ನೋದು ಇನ್ನು ತೀರ್ಮಾನ ಮಾಡಿಲ್ಲ. ಪಕ್ಷದ ಯಾವ ನಾಯಕರ ಜೊತೆಗೂ ನನಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಅಂಬರೀಶ್ ಖಡಕ್ ಉತ್ತರ ನೀಡಿದ್ದಾರೆ ಮೂಲಗಳು ತಿಳಿಸಿವೆ. ಇದನ್ನು ಓದಿ: ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್
Advertisement
ಮಂಡ್ಯ ಜಿಲ್ಲೆಯ 4 ಕ್ಷೇತ್ರದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕೆಂದು ಹಿರಿಯ ನಟ ಮತ್ತು ಮಾಜಿ ಸಚಿವ ಅಂಬರೀಶ್ ಪಟ್ಟು ಹಿಡಿದಿದ್ದಾರೆ. ಆದರೆ ಅಂಬರೀಶ್ ಅವರ ಈ ಬೇಡಿಕೆಯನ್ನು ರಾಜ್ಯದ ಕೈ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಜೊತೆ ಅಂಬಿ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.