ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

Public TV
2 Min Read
mnd sumalatha ambhareesh

ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದು ಮಂಡ್ಯದಿಂದ ಸಾವಿರಾರು ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

ಸ್ಯಾಂಡಲ್‍ವುಡ್ ಕಲಾವಿದರು ಒತ್ತಾಯ ಮಾಡಿದ್ದು ಆಯ್ತು, ಈಗ ಅಂಬರೀಶ್ ಅಭಿಮಾನಿಗಳ ಒತ್ತಾಯ ಶುರುವಾಗಿದೆ. ಹೌದು ಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವಂತೆ ರೆಬೆಲ್ ಸ್ಟಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮನವಿ ಮಾಡಿಕೊಳ್ಳಲು ಇಂದು ಮಂಡ್ಯದಿಂದ ಬೆಂಗಳೂರಿನ ಅಂಬರೀಶ್ ಅವರ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ.

AMBI

ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಸಕ್ಕರೆನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅನ್ನೋ ಒತ್ತಾಯ ತೀವ್ರವಾಗಿ ಕೇಳಿಬರ್ತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್‍ನ ಪ್ರಮುಖರು ಕೂಡ ಸುಮಲತಾ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳಿಂದ ಸುಮಲತಾ ಸ್ಪರ್ಧೆಗೆ ಒತ್ತಾಯ ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಈಗಾಗಲೇ ಮೈತ್ರಿ ಪಕ್ಷದಿಂದ ಸುಮಲತಾರನ್ನು ಕಣಕ್ಕಿಳಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ ಅಂಬಿ ಅಭಿಮಾನಿಗಳು ಸುಮಲತಾ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಾಯ ಮಾಡಲಾಗಿದೆ ಅಂತ ಮಾಹಿತಿ ಮೂಲಗಳು ತಿಳಿಸಿವೆ.

HDK NIKIL KUMARASWAMY

ಇಂದು ಬೆಳಗ್ಗೆ ಮಂಡ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂಬರೀಶ್ ರವರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಶತಾಯಾ-ಗತಾಯ ಸುಮಲತಾ ಅಂಬರೀಶ್ ರವರ ಮನವೊಲಿಸಿ ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಲಿದ್ದಾರೆ. ಬೆಳಗ್ಗೆ ಮಂಡ್ಯ ನಗರದಿಂದ ಎರಡು ಬಸ್ಸುಗಳನ್ನು ಮಾಡಲಾಗಿದ್ದು, ಜಿಲ್ಲಾದ್ಯಂತ ಹಲವಾರು ಬಸ್ ಮೂಲಕ ತೆರಳಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.

CONGRESS JDS

ಮತ್ತೊಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ಕೂಡ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಕುಮಾರಸ್ವಾಮಿಯವರು ಕೂಡ ಅಭಿಮಾನಿಗಳ ಒತ್ತಾಯ ಇದೆ. ಹೀಗಾಗಿ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಸದ್ಯ ಮಂಡ್ಯದಲ್ಲಿ ಈ ಬಾರಿ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋ ಗೊಂದಲ ಶುರುವಾಗಿದ್ದು, ಮೈತ್ರಿ ಪಕ್ಷ ಯಾವ ರೀತಿ ಇದನ್ನ ಸರಿಪಡಿಸಿಕೊಂಡು ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೆ ಅಂತ ಕಾದು ನೋಡಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *