ಸಿನಿಮಾ ಹಾಗೂ ರಾಜಕೀಯದಲ್ಲಿ ಅಜಾತಶತ್ರುವಾಗಿ ಬೆಳೆದು ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರಿಗೂ `ಕರ್ನಾಟಕ ರತ್ನ’ (Karnataka Ratna) ಪುರಸ್ಕಾರ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ (Actress Tara) ಮನವಿ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನ ಭೇಟಿಯಾಗಿ ನಟಿ ತಾರಾ ಅನುರಾಧ ಮನವಿ ಪತ್ರ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಲ್ಲದೇ ಕಲಿಯುಗದ ಕರ್ಣ ಎಂದು ಕರೆಸಿಕೊಳ್ಳುವ ಜನಮೆಚ್ಚಿದ ಕಲಾವಿದ ಅಂಬರೀಶ್. ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದರು, ರಾಜಕೀಯದಲ್ಲಿದ್ದರೂ ಪಕ್ಷಗಳ ಬೇದಭಾವವಿಲ್ಲದೆ ಸರ್ವರಿಗೂ ಇಷ್ಟವಾಗುವ ಸಜ್ಜನ ರಾಜಕಾರಣಿಯಾಗಿದ್ದರು.
ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಈ ಕಲಾವಿದನಿಗೆ ತಕ್ಕ ಗೌರವ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿಕೊಂಡಿದ್ದರು. ಇತ್ತೀಚೆಗೆ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಸರ್ಕಾರ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು.
ಇದರ ಬೆನ್ನಲ್ಲೇ ಮರಣೋತ್ತರ `ಕರ್ನಾಟಕ ರತ್ನ’ ಗೌರವವನ್ನ ರೆಬೆಲ್ ಸ್ಟಾರ್ ಅಂಬರೀಶ್‌ಗೂ ಕೊಡುವಂತೆ ಒತ್ತಾಯ ಕೇಳಿಬಂದಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಪರವಾಗಿ ಹಿರಿಯ ನಟಿ ತಾರಾ ಅನುರಾಧ, ಡಿಸಿಎಂ ಬಳಿ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.