ಮುಂಬೈ: ಕಳೆದ ಒಂದು ವಾರದಿಂದ ಮುಂಬೈನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ ಅತೃಪ್ತ ಶಾಸಕರು ಇಂದು ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇಂದು ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಮಾಡಿ ಶಪಥ ಮಾಡಿದ್ದಾರೆ.
ಇಂದು ಬೆಳಗ್ಗೆ ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈನಿಂದ ಶಿರಡಿಗೆ ತೆರಳಿದ್ದರು. ಈ ವೇಳೆ ಸಾಯಿ ಬಾಬಾನ ದರ್ಶನ ಪಡೆದ ಅವರು, ವಿಶ್ವಾಸಮತ ಯಾಚನೆ ವೇಳೆ ನಾವು ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗುವುದಿಲ್ಲ. ಬಹುಮತಯಾಚನೆ ವೇಳೆ ನಾವು ಗೈರಾಗುತ್ತೇವೆ. ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಲೇಬಾರದು. ರಾಜೀನಾಮೆ ಕೊಟ್ಟು ವಿಶ್ವಾಸಮತಯಾಚನೆ ವೇಳೆ ಹಾಜರಾದರೆ ಅರ್ಥನೇ ಇಲ್ಲ ಎಂದು ಶಪಥ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅತೃಪ್ತ ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಪಡೆದ ನಂತರ ಶನಿಶಿಂಗ್ನಾಪುರಕ್ಕೆ ತೆರಳಿದ್ದಾರೆ. ನಂತರ ಅಲ್ಲಿಂದ ಅಜಂತಾ, ಎಲ್ಲೋರಾ ಗುಹಾಂತರ ದೇಗುಲಗಳಿಗೆ ಭೇಟಿ ಕೊಟ್ಟಿದ್ದಾರೆ. ಇಂದು ರಾತ್ರಿ ಔರಂಗಾಬಾದ್‍ನಲ್ಲಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನಂತರ ಭಾನುವಾರ ನಾಸಿಕ್‍ನ ತ್ರಯಂಬಕೇಶ್ವರನ ದರ್ಶನ ಮುಗಿಸಿ ಸಂಜೆ ಮತ್ತೆ ಮುಂಬೈಗೆ ವಾಪಸ್ ಆಗಲಿದ್ದಾರೆ.
ಶುಕ್ರವಾರ ಮುಂಬೈನ ರಿನೈಸನ್ಸ್ ಹೋಟೆಲ್‍ನಿಂದ ಹೊರ ಬಂದ ರೆಬೆಲ್ ಶಾಸಕರಾದ ಬಿ.ಸಿ ಪಾಟೀಲ್, ಬೈರತಿ ಬಸವರಾಜ್, ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಸಂಕಷ್ಟ ನಿವಾರಿಸಲು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದ ನಾಲ್ವರು ಶಾಸಕರು ನಂತರ ಮುಂಬೈನ ದಾದರ್ ನಲ್ಲಿರುವ ಗೋವಾ ಪೋರ್ಚುಗೀಸ್ ಹೋಟೆಲಿನಲ್ಲಿ ಊಟ ಮುಗಿಸಿ ಮತ್ತೆ ರಿನೈಸನ್ಸ್ ಕಡೆ ತೆರಳಿದ್ದರು.